ಭಾನುವಾರ, ಮಾರ್ಚ್ 25, 2012

ಇದು ನಾನಲ್ಲ..

ವರುಷಗಳೇ ಉರುಳಿ ಹೋಗಿ
ಕನ್ನಡಿಯ ಎದುರಿಗೆ ನಿಂತ ಒಡನೆ
ಹೊಳೆದದ್ದು ಎರಡೇ ಪದ
ಇದು ನಾನಲ್ಲ...

ಅಡ್ಡಾದಿಡ್ಡಿ ಬೆಳೆದ ದಾಡಿ
ಮೂಗ ಹೊಳ್ಳೆಯಿಂದ ಅಸಹ್ಯ ಕೂದಲು
ಗುಳಿ ಬಿದ್ದ ಕಣ್ಣುಗಳಲ್ಲಿ ಹೇಸಿಗೆ ಪಿಚ್ಚು
ಶೋಕಿಗೆ ಇಳಿಬಿಟ್ಟ ಕೂದಲಲ್ಲಿ ಭಯದ ಜಿಡ್ಡು

ಭಾವನೆಗಳೆಲ್ಲ ಅಳಿದು ಹೋಗಿ
ಖಾಲಿಯಾದ ಟೈಯ ಎಡಭಾಗದಲಿ
ಫ್ಯಾನಿನ ಗಾಳಿಗೆ ಹಾರಾಡುವ ಅಂಗಿ
ಕೂಡ ಒಸರಿದ್ದು ಇದು ನಾನಲ್ಲ...

ಸೌಂದರ್ಯ ಕಂಡು ಭಯಬಿದ್ದು
ಗುಲಾಬಿ ಗಿಡದಲ್ಲಿ ಬರಿ ಮುಳ್ಳು ಕಂಡು
ಪ್ರೀತಿಯ ಪದ ಉಸುರುವ ಮುನ್ನ
ಗಣಿತದ ಸೂತ್ರಗಳ ನೆನಪು ಕಾಡಿ

ಜಗದ ಹೃದಯಸುಮವ ತಡಕಿ
ಗಾಳಿಯಲ್ಲೂ ಸಂಗೀತ ಹುಡುಕಿ
ಜಡಿವ ಮಳೆಯಲಿ ನೃತ್ಯ ಕಂಡ
ಮನಕೆ ಬೀಗ ಬಿದ್ದಿದೆ ಇದು ನಾನಲ್ಲ...

ಹರಿವೆಗುಂಟ ತೇಲಿದ ಎಲೆ
ಕಾಂಡಕೆ ಸುತ್ತಿಕೊಂಡ ಲತೆ
ಬೆಂಕಿಗೆ ಬೂದಿಯಾದ ಹಾಳೆ
ಬೆಳಕ ಹಿಂಬದಿಯ ನೆರಳು

ಬದುಕಿನ ಬಲಾತ್ಕಾರ ಸಹಿಸಿ
ಸಾವ ವಿರಹ ಬೇಗುದಿಲಿ ತೊಳಲಿ
ಪ್ರೀತಿ ಭಾವ ಕರುಣೆ ಕಮರಿ
ಬರಿ ಮಾಂಸ ಖಂಡಗಳ ಗೂಡಿದು ನಾನಲ್ಲ..

...ಪ್ರವೀಣ

ಮಂಗಳವಾರ, ಮಾರ್ಚ್ 13, 2012

ನಿರಾಶೆ

ಗೆಳೆಯ
ನೋಡಲೇ ಇಲ್ಲವೇ ನೀನು
ಹೊತ್ತಗೆಯ ನಡುಮಧ್ಯ ಅದೇ ಆಗ
ಅರಳಿದ ಆ ಗುಲಾಬಿ ಹೂವಂದವ?

ಯಾರೋ ಕೊಟ್ಟ ಹಾಗೆ
ತೆರೆಯದೆ ಇಟ್ಟುಬಿಟ್ಟೆಯಾ ಮಾಡಿನಲ್ಲಿ?

ಬೆಳಗಾ ಎದ್ದು ಊರೆಲ್ಲಾ ಅಲೆದು
ತೋಟಗಳ ಹೆಕ್ಕಿ ನಿನ್ನಂದಕೆ
ಸರಿಸಾಟಿ ಆ ಮಿದು ಗುಲಾಬಿ ಅಯ್ದಿದ್ದೆ
ಮುಳ್ಳುಗಳ ಮೆತ್ತಗೆ ಬಿಡಿಸಿ
ಹಾಳೆಗಳ ಮೆತ್ತೆಯಲ್ಲಿ ನಾಜೂಕಾಗಿ
ಪ್ರೀತಿಯರುಹಲು ಕಿವಿಯಲುಸುರಿ
ನಿನ್ನ ಕೈಯಲಿ ರವಾನಿಸಿದ್ದೆ.

ಪುಸ್ತಕ ದಪ್ಪವಾದದ್ದೂ ತಿಳಿಯಲಿಲ್ಲವೇ?
ಮಧ್ಯದ ಕುಳಿಯೂ ಕಾಣಲಿಲ್ಲವೇ?

ಗೆಳತಿ...
ಬಾಡಿ ಹೋಗಿರಬೇಕು ನನ್ನ ಹೂ
ನೀ ಹಿಡಿದ ಒತ್ತಡಕ್ಕೆ ನಲುಗಿ
ತೇವವೆಲ್ಲಾ ಕಳೆದು ಮುರುಟಿ
ಹಾಳೆಯಾಗಿರಬೇಕು ನನ್ನ ಹೂ
ಬಣ್ಣವೆಲ್ಲ ಹಾಳೆಗಂಟಿ
ಕಳೆಹೀನವಾಗಿರಬೇಕು ನನ್ನ ಹೂ

ಗೆಳತಿ
ಮುಚ್ಚಿಟ್ಟು ಕೊಟ್ಟೆಯಾ ಗೆಳೆಯಾ?
ಯಾರಿಗೂ ತೋರದಂತೆ
ಯಾರಿಗೂ ತಿಳಿಯದಂತೆ
ಮುಚ್ಚು ಮರೆಯ ಕೆಟ್ಟ ಕೆಲಸವೇ
ನನ್ನ ನಿನ್ನ ಪ್ರೀತಿ?

ಜಗದೆದುರು ಎದೆತಟ್ಟಿ
ಬಾನತುಂಬಾ ಕನಸ ಕಟ್ಟಿ
ಪ್ರೀತಿ ಮನವ ತುಂಬಲೆಂದಿದ್ದೆ.

ನನ್ನ ಹೃದಯ ಕದವ
ನೀ ತಟ್ಟಿದಾಗ ಪಟ್ಟನೆ
ಒಳಗೆ ಕರಕೊಳಲಿಲ್ಲವೇ ಗೆಳೆಯ?

ನಿನ್ನ ರಾಗಕೆ ತಾಳವಾಗಿ
ನಿನ್ನ ಚಿತ್ರಕೆ ಬಣ್ಣವಾಗಿ
ನಿನ್ನ ಕಾವ್ಯಕೆ ಉಪಮೆಯಾಗಿದ್ದೆ ನಾ.

ಪುಸ್ತಕ ಮಧ್ಯದ ಕುಳಿ ಕಂಡೊಡನೆ
ಮಮ್ಮಲ ಮರುಗಿತ್ತು ಮನವು
ಜಗಕೆ ಬೆಳಕು ಚೆಲ್ಲುವ ನೇಸರ
ಚಂದಿರನ ಹಿಂದೆ ಗ್ರಹಣ ಹೋದನೇ?

----ಪ್ರವೀಣ


ಶನಿವಾರ, ಮಾರ್ಚ್ 10, 2012

ಕಾಗೆಯ ಮಲ

















ಅರ್ಧ ಕಿಲೋಮೀಟರ್ ಸನಿಹ ಸೂರ್ಯ
ಸಾವಿರ ಕಿಲೋಮೀಟರ್ ದೂರ ಜೀವ
ಭೂಮಂಡಲದ ಮಟಾಮಧ್ಯದಲ್ಲಿ
ಬಟಾಬಯಲಿನಲಿ ಅಲೆಯುತಿದ್ದೆ
ದಿಕ್ಕುಗಳು ಮಿಥ್ಯೆಯೆಂದು ಸಾಧಿಸುತ

ತಲೆಯ ಮೇಲೆ, ಕಿವಿಗಳ ಮೇಲೆ
ಮೇಣ್ ಬೆನ್ನ ಮೇಲೆ ಪತ್ ಎಂದು ಬಿತ್ತು
ಬೆರಳಲಿ ಹಿಡಿದು ನೋಡಿದರೆ ಕಾಗೆಯ ಮಲ

ಅಖಂಡ ಬ್ರಹ್ಮಾಂಡವೆಲ್ಲ ಅಲೆದು
ಅತಳ ವಿತಳ ಪಾತಾಳಗಳ ಹೊಕ್ಕು
ಹುಡುಕಿ ತುಂಡು ತುಂಡು ಮಾಡುವವರೆಗೆ ನಿನ್ನ
ಹನಿ ನೀರ ಮುಟ್ಟಲಾರೆನೆಂಬ ಪಣ ತೊಟ್ಟೆ
ಆಕ್ರೋಶದಾ ಅತಿಶಯದ ಘಳಿಗೆಯಲಿ

ಮೇಲೆ ನೋಡಿದರೆ ಸೂರ್ಯನೇ ಏಕಾಂಗಿ
ಕಣ್ಣು ಹರಿದಷ್ಟು ದೂರ ಗಾಳಿಯ ಪತ್ತೆಯಿಲ್ಲ
ಸೋಲೆಂಬುದೆನ್ನ ನಿಘಂಟಿನಲೇ ಇಲ್ಲ
ತೊಟ್ಟ ಪಣ ಮುಟ್ಟುವವರೆಗೆ ನಿದ್ದಿಲ್ಲ ನೀರಡಿಕೆಯಿಲ್ಲ

ಗಿಡ ಮರ ಕೊಂಬೆ ಬಾಗಿಲು ಕಿಟಕಿ
ಗುಡಿ ಗುಂಡಾರ ಅಂಗಡಿ ಭಂಡಾರ
ನದಿ ತೊರೆ ಭಾವಿ ಸಾಗರದಾಳ
ಸೂರ್ಯ ಚಂದ್ರ ನಕ್ಷತ್ರ ಗ್ರಹಗಳ
ಮನುಜ ಮತಿಯ ಕಲ್ಪನೆಯ ತಾಣಗಳ
ಎವೆಯಿಕ್ಕದೆ ಬೆನ್ನು ಹಚ್ಚದೆ ಅರಸಿದೆ

ನಾಚಿಕೆಯಿಲ್ಲದ ಹಸಿವು ಮಾನವಿಲ್ಲದ ದಣಿವು
ಮಾತುಗಳ ಗೌರವವೆನಿತಿಲ್ಲದ ನೀರಡಿಕೆ
ಕಾಗೆಯ ವಿಳಾಸ ಸಿಗುವ ಮೊದಲೇ
ನನ್ನ ಪ್ರಾಣ ತೆಗೆವ ಸಂಚು ಹೂಡಿದಂತೆ
ಧಸಕ್ಕನೆ ಮನೆಯೆಂಬೋ ಮನೆ ಸೇರಿದೆ

ಹಿತ್ತಲ ತುಂಬೆಲ್ಲ ಮಲ ಚೆಲ್ಲುವ
ಅಜ್ಜ ನೆಟ್ಟ ಮರಗಳ ಗಾಳಿಯ ಬಯಕೆಗೆ
ಮೆತ್ತಗೆ ಹಿತ್ತಿಲವಾಗಿಲ ತೆರೆದರೆ
ಕರಗಸದಂತೆ ಕೂಗುತಿಹ ಕಾಗೆಗಳ ಸೈನ್ಯ
ತಿಂದ ಸಿಟ್ಟೆಲ್ಲ ಹೊಟ್ಟೆಯಿಂದ ಹೊಡಮರಳಿ
ಎತ್ತಿದರೆ ಕತ್ತಿ ತಲೆ ಸುತ್ತಿ ಬವಳಿ

ತಲೆಯ ಮೇಲೆ ಹೇತ ಕಾಗೆಯ
ಗುರುತೆಲ್ಲಿ ಇಹುದೆನ್ನ ಬಳಿ

-------
ಫ್ರಿಜ್ಜಿನ ಬಾಗಿಲ ತೆಗೆದು
ಮಂಜುಗಟ್ಟಿದ ಬಾಟಲಿ ಎತ್ತಿ
ಜನ್ಮಾಂತರಗಳ ನೀರಡಿಕೆಯ ಕೊಂದುಬಿಟ್ಟೆ.

...ಪ್ರವೀಣ

ಬುಧವಾರ, ಮಾರ್ಚ್ 7, 2012

ಜೀವನಗಾಥೆ

ಬಳಸಿ ಎಸೆದ ಪ್ಲಾಸ್ಟಿಕ್ಕಿನ ಚೀಲ
ಗಾಳಿಯ ಒತ್ತಡಕ್ಕೆ ಸಿಲುಕಿ ಹಾರುತ್ತಾ
ಪರಿಧಿಯಿಲ್ಲದಂಬರದಲಿ ಏಕಾಂಗಿ

ಇರುವುದೆಲ್ಲವ ಕಳಚಿ
ಹಗುರವಾದರೆ ಹೀಗೆ
ನೆಲೆಯಿಲ್ಲ, ನೆಲದ ಅಕ್ಕರೆಯಿಲ್ಲ
ಗಾಳಿ ಒಯ್ದತ್ತ ತೂರಿ
ಮಳೆ ಹುಯ್ದತ್ತ ಕೊಚ್ಚಿ
ಕಳೇಬರವಾಗಿ ಕಳಕೊಂಡು ತನ್ನ

ಹೆತ್ತೊಡಲ ಹೊಟ್ಟೆಯಲಿ ಉಸಿರು
ಸಿಕ್ಕುವಂತೆ ಬಿಗಿದು, ಮೂಲೆಯ
ಮೊಳೆಗೆ ನೇತಾಕಿ, ಸಕ್ಕರೆ,
ಬೆಲ್ಲ, ಹಿಟ್ಟು, ಬಟ್ಟೆ, ತರಕಾರಿ,
ಹಣ್ಣು, ಕಾಯಿ, ಬಣ್ಣ, ಬಾಟಲಿ
ಕಿತ್ತು ಬರುವಂತೆ ಕತ್ತು
ಹೊತ್ತೊಯ್ದರೂ ಚಕಾರವೆತ್ತಿಲ್ಲ.
ಕೊರೆವ ಚಳಿಯಲಿ ಕಾಪಿಟ್ಟು,
ಮಗನ ಆಟಿಕೆಗಳ ಕುಟ್ಟಿ,
ಬೇಸರವೇರಿ ಹವೆಯೂದಿ
ಫಟ್ಟನೊಡೆವ ನೋವಿಗಾರ್ತನಾದ
ಕಸ ಮುಸುರೆ ತುರುಕಿ
ಕೊಳಚೆಗೆಸೆದರೂ ನೊಂದಿಲ್ಲ
ಕಾಯಕಗೈದ ಸಾರ್ಥಕತೆ ಮನದಲ್ಲಿ

ಇಂದು ಅಂತ್ಯವಿರದಂತರಿಕ್ಷದಲಿ
ಗೊತ್ತು ಗುರಿಯಿಲ್ಲದೆ ಹಾರುವ
ವಸ್ತು ಕಂಡು, ಮುದಗೊಂಡು
ಹಾರಿ ಬರುತಿಹ ಹಕ್ಕಿ
ಕೊಕ್ಕಿನಲ್ಲಿ ಕುಕ್ಕಿ ಫಡಫಡ
ಫರ್ರನೆಯ ನಾದಕೆ ಪುಳಕವಾಗಿ
ಹಾರಿಬಿಟ್ಟರೆ ನನ್ನ, ಇನ್ನೊಂದು
ಹಕ್ಕಿ ಬಂದು, ಹಾರಿ ಚೆಲ್ಲುವಾಟ
ಸಾವಿನ ನೆನಪಾಗದೆ ಇಹುದೇ?

ಮರಣವೂ ಇಲ್ಲ ಕೊನೆಗೆ
ತುಂಡು ತುಂಡಾಗಿ ಸುಟ್ಟು
ಕೊಳಚೆಯಲಿ ಕೊಚ್ಚಿ
ಪರಿಸರ ಮಾಲಿನ್ಯದ ಪಟ್ಟ ಬೇರೆ!

----ಪ್ರವೀಣ.

ಶುಕ್ರವಾರ, ಮಾರ್ಚ್ 2, 2012

ಮೂರು ವರುಷದ ವಿರಹ

ಭುವಿಯ ರಾಜ್ಯದ ತುಂಬಾ
ಸೂರ್ಯನದೇ ದಬ್ಬಾಳಿಕೆ
ಇನಿಯನಾಸರೆಯಿಲ್ಲದೆ ಬೇಸರಿಸಿ
ಪಚ್ಚೆ ಪೈರಿನ ಜಾಗದಲಿ
ಮುರುಟಿ ಹೋದ, ತೇಪೆ ಮೆತ್ತಿದ
ಹರಿದು ಹದಿನಾರಾದ ಸೀರೆ,
ಮನವೆಲ್ಲಾ ಮರುಗಿ, ಮೈಯೆಲ್ಲಾ ಸೊರಗಿ
ಚಕಚಕನೆ ಹೊಳೆವ ಚರ್ಮದ
ತುಂಬಾ ಲಕ್ಷಾಂತರ ಬಿರುಕುಗಳು.

ಕಾದಿಹಳು ಕಾಲನಕಾಲ ಮೃತ್ಯುವಿನವರೆಗೂ
ನೊಂದಿಹಳು ಮಕ್ಕಳ ಹೊಟ್ಟೆಗೂ ಇಲ್ಲದೆ
ಪ್ರಿಯನಿಲ್ಲದೆ ಪರಪೀಡೆಯನನುಭವಿಸುತ
ಕಣ್ಣೀರು ತುಂಬಿ ಹರಿದಿಹುದು ಇಳೆತುಂಬಾ.

ನಂಬುಗೆಯುಂಟು ಬಂದೇ ಬಹನವನು
ಸೂರ್ಯನ ಶಾಖ ಸಂಕುಲದಿಂದೆನ್ನ
ಬಿಡಿಸಿ, ಒಲವಿನ ಮಳೆಗರೆದು
ಮನತುಂಬಾ ಹೂಮಾಲೆಯಾಗುವನು.

ಸೂರ್ಯನಿಗೆ ಸೋತು, ಭುವನವ ತೊರೆದು;
ಸೈನ್ಯ ಒಗ್ಗೂಡಿಸಿ, ಇಡಿ ಇಡಿಯಾಗಿ
ಪಡಿಮೂಡಿ ಬಾನಿನಲಿ ಸೂರ್ಯನ
ಹುಟ್ಟಡಗಿಸಲು ಧೈರ್ಯದೆ ಬಂದಿಹನು ಮೇಘ.
ಕಲೆಯಿಂದ, ಮನದ ಬಲದಿಂದ
ಸೆಣಸಾಡಿ, ಭುವಿಯತ್ತ ಚಾಚಿದ
ಕೈಗಳ ಕಚಕಚನೆ ಕತ್ತರಿಸಿ
ಗೆದ್ದಾನು ಮೇಘ ಸೂರ್ಯನ ಬಂಧಿಸಿ.

ಕಲಕಲನೆ ನಕ್ಕಾಳು ಭೂಮಿ
ತನ್ನಿನಿಯನ ಮೊಗವನ್ನು ನೀವಿ
ಕರೆದಾಳು ಹೃದಯಮಂಟಪಕೆ...

ಮೂರು ವರುಷದ ವಿರಹ
ತಡೆಯಲಾಗದೆ ಬೇಗೆ
ಸಿಡಿಲಗೈಯಿಂದ ಚಿವುಟಿಹನು ತೊಡೆಯ
ಒಡನೆ ನೋವಿಗೆ ಗುಡುಗಿ
ಮುಲುಗಿಹಳು ಪೊಡವಿ
ತಪ್ಪಿಗೆ ಕಪ್ಪಿಟ್ಟು ಮೆಲ್ಲ ಕಚಗುಳಿಯಿಟ್ಟು
ರಮಿಸಿದನು ಸುಂದರಿಯ ಸಿಟ್ಟು
ನಾಚಿ ನೀರಾಗಿ ನಿಡುಸುಯ್ದು ಎಲ್ಲೆಲ್ಲೂ
ಮಣ್ಣ ಕಂಪನು ಸೂಸಿಹಳು ಧರಿಣಿ.

ಸಕಲ ಚರಾಚರಗಳೆಲ್ಲ
ಕೈಬೀಸಿ ಕರೆದಾವು,
ಬಾರಯ್ಯ ತಂದೆ
ಪ್ರೀತಿಯ ಮಳೆಗರೆಯೆ.

ಭಾವುಕ ಮೇಘ ಮೆತ್ತಗೆ
ಮುದ್ದಿಟ್ಟು ಮೈದಡವಿ
ಸಳಸಳನೆ ಸುಳಿದಿಹನು.
ಚುಂಬನ, ಆಲಿಂಗನ, ಬಾಹುಬಂಧನ.

ಅವನಿಯ ಮೈಮನಗಳೆಲ್ಲ ಅರಳಿ
ಬತ್ತಿದ ಮೊಲೆಗಳಲಿ ಹಾಲು ತುಳುಕಿ
ಹರಿದ ನದಿಗುಂಟ ಜೀವಸಂಕುಲವೆಲ್ಲ
ಮನದಣಿಯೇ ಕುಡಿದು ಕುಪ್ಪಳಿಸಿ

ಉಲಿದಾವೋ ಹಕ್ಕಿ
ನಲಿದಾವೋ ನವಿಲು
ಖಗ ಮೃಗಗಳೆಲ್ಲ
ಬಾನಂಗಳಕೆ ನೆಗೆದಾವೋ.

ಒಲುಮೆಯ ಹಬ್ಬ
ಕಳುತನದಿ ಈಕ್ಷಿಸಿದ
ಸೂರ್ಯ ಬಣ್ಣ ಬಣ್ಣದ
ಓಕುಳಿಯಾ ಆಡ್ಯಾನೋ.
=======
ಮರುದಿನ ಪ್ರೀತಿಯದು ಫಲಿಸಿ
ಕೋಟಿಕೋಟಿ ಜೀವಿಗಳು ಚಿಗುರಿಹವು
ತಿರೆಯ ಬೆತ್ತಲೆ ಮೈಗೆ
ಹಚ್ಚ ಹಸುರಿನ ಸೀರೆಯ ಉಡಿಸಿಹವು.
....ಪ್ರವೀಣ.