ಭಾನುವಾರ, ಜೂನ್ 24, 2012

ಸಾಹಿತ್ಯ ತರಬೇತಿ


ಹಿಂದಿನ ಒಂದು ವಾರದಲ್ಲಿ ಎರಡು ಪುಸ್ತಕಗಳನ್ನು ಓದಿದೆ.  ಒಂದು ರಹಮತ ತರೀಕೆರೆಯವರ “ಅಂಡಮಾನ್ ಕನಸು”, ಎರಡು ಸ್ಪೇನಿನ ಗ್ಯಾಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಜ್ ಅವರ “ಲವ್ ಇನ್ ದ ಟೈಮ್ ಆಫ್ ಕಾಲರಾ”. ಇಂದು ಬೆಳಿಗ್ಗೆ ‘ವಿಜಯವಾಣಿ’ಯಲ್ಲಿ ಎಸ್.ಎಲ್.ಭೈರಪ್ಪನವರ ಸಂದರ್ಶನ ಓದಿದೆ.  ಅವರೆಲ್ಲ ಬರೆವ ಪರಿ, ಅವರ ಯೋಚನಾ ಶಕ್ತಿ, ಆಡುವ ಮಾತುಗಳು ನಾನು ತೃಣಕ್ಕೆ ಸಮಾನ ಎಂಬುದನ್ನು ಸಾರಿ ಹೇಳಿದಂತಿತ್ತು.  ರವೀಂದ್ರನಾಥ ಟ್ಯಾಗೋರ, ಶಿವರಾಮ ಕಾರಂತ, ಕುವೆಂಪು, ಬೇಂದ್ರೆ ಇವರೆಲ್ಲ ಜೊತೆಗೆ ನೆನಪಿಗೆ ಬಂದು ಅವರು ಏರಿದ ಉತ್ತುಂಗ ನಾನು ಕಾಣಲು ಸಾಧ್ಯವೇ ಎಂಬ ಪ್ರಶ್ನೆ ಹುಟ್ಟಿಸಿದವು.

ಅಂಥ ಸಾಧನೆಗಳನ್ನು ಮಾಡಬೇಕಾದರೆ ತಪಸ್ಸು ಮಾಡಬೇಕಾಗುತ್ತದೆ.  ಎಷ್ಟೆಲ್ಲ ಓದು, ಎಷ್ಟೆಲ್ಲ ಅನುಭವ, ಅಲೆದಾಟ, ಪರಿಶ್ರಮ ಬೇಕು ಎಂದೆಲ್ಲ ಅನಿಸತೊಡಗಿತು.  ವರ್ಷಾನುಗಟ್ಟಲೆ ಸಂಗೀತದ ರಿಯಾಜ್ ಮಾಡುವಂತೆ ಸಾಹಿತ್ಯದ ಅಭ್ಯಾಸ ಮಾಡಬೇಕು, ಅನೇಕಾನೇಕ ಪ್ರಯೋಗಗಳನ್ನು ಮಾಡಬೇಕು, ಬರೆಯುವ ರೂಢಿ ಮಾಡಿಕೊಳ್ಳಬೇಕು.  ಸಾಹಿತ್ಯವನ್ನು ಸಂಗೀತದೊಡನೆ ಹೋಲಿಸುವಾಗ ಇನ್ನು ಉಳಿದ ಕಲಾಪ್ರಕಾರಗಳೂ ಕೂಡ ಹಾಗೆಯೇ ಎಂಬ ಜ್ಞಾನೋದಯವಾಯಿತು.  ಯಾವುದೇ ಕಲೆಯನ್ನು ಎತ್ತಿಕೊಂಡರೂ ಉದಾ: ನಟನೆ, ನೃತ್ಯ, ಚಿತ್ರಕಲೆ, ಸಂಗೀತ, ಸಾಹಿತ್ಯ ಇವುಗಳಿಗೆಲ್ಲ ನಿರಂತರ ಪ್ರಯತ್ನ, ಪರಿಶ್ರಮ, ನಿಷ್ಠೆ, ತಾಳ್ಮೆ, ಉತ್ಕಟೇಚ್ಛೆ, ಅಪಾರವಾದ ಪ್ರೀತಿ ಇವುಗಳು ಬೇಕು. ಜೊತೆಗೆ ಒಬ್ಬ ಗುರುಗಳ ಮಾರ್ಗದರ್ಶನ, ತರಬೇತಿ ಕೂಡ ಅವಶ್ಯಕ.  ಸಾಹಿತ್ಯ ಒಂದನ್ನುಳಿದು ಮಿಕ್ಕ ಕಲಾಪ್ರಕಾರಗಳಿಗೆಲ್ಲ ತರಬೇತಿ ಸಿಗುತ್ತದೆ.  ಆದರೆ ಸಾಹಿತ್ಯಕ್ಕೆ ಪ್ರತ್ಯೇಕವಾದ ತರಬೇತಿ ನಮ್ಮ ದೇಶದಲ್ಲಿ ಇದ್ದಂತಿಲ್ಲ.

ಜೀವನದ ಯಾವುದೋ ಒಂದು ಪ್ರಸಂಗದಲ್ಲಿ, ಎಲ್ಲಿಯೋ ಸ್ಫೂರ್ತಿ ಪಡೆದು ಕತೆ, ಕವಿತೆ ಬರೆಯಲು ಪ್ರಾರಂಭಿಸುತ್ತೇವೆ.  ಬರೆದವುಗಳನ್ನು ಗೆಳೆಯರಿಗೆ ತೋರಿಸಿ ಹೊಗಳಿಕೆ ಗಿಟ್ಟಿಸಿಕೊಳ್ಳುತ್ತೇವೆ.  ನಂತರ ಸ್ವಲ್ಪ ಧೈರ್ಯ ಬಂದು ಸಮೀಪದಲ್ಲಿ ಸಿಗುವ ಹಿರಿಯ ಸಾಹಿತಿಗಳ ಮುಂದೆ ಬರೆದುದನ್ನು ಚಾಚುತ್ತೇವೆ.  ಅವರ ಸಲಹೆ, ಸೂಚನೆ, ಮಾರ್ಗದರ್ಶನ ದೊರೆತರೆ ಅನೇಕ ಸುಧಾರಣೆಗಳನ್ನು ಮಾಡಿಕೊಳ್ಳುತ್ತೇವೆ.  ಈಗೀಗ ಅಂತರ್ಜಾಲದ ಸಹಾಯದಿಂದ ಬ್ಲಾಗಗಳಲ್ಲಿ, ಫೇಸಬುಕ್ ತಾಣಗಳಲ್ಲಿ ಪ್ರಕಟಿಸಿ ಮತ್ತಷ್ಟು ಹೊಗಳಿಕೆ, ಪ್ರೇರಣೆ ಪಡೆಯುತ್ತೇವೆ.  ನಂತರ ಇನ್ನೊಂದಿಷ್ಟು ಆತ್ಮವಿಶ್ವಾಸ ಮೂಡಿ ಪತ್ರಿಕೆಗಳಿಗೆ ಕಳುಹಿಸಿಕೊಡುತ್ತೇವೆ.  ಅಲ್ಲಿ ಪ್ರಕಟವಾದರೆ ತಾನೊಬ್ಬ ಸಾಹಿತಿ ಎಂದು ನಂಬಲು ಶುರುಮಾಡುತ್ತೇವೆ.

ಆದರೆ ಈ ರೀತಿಯಾಗಿ ಅಡ್ಡಾದಿಡ್ಡಿಯಾಗಿ ಬೆಳೆವ ಸಾಹಿತ್ಯ ಎಲ್ಲಿಯೋ ಒಂದು ಕಡೆಗೆ ಎಡವಿ ನಿಂತುಬಿಡುವ ಅಪಾಯವಿದೆ.  ಸರಿಯಾದ ಮಾರ್ಗದರ್ಶನ ಸಿಗದೆ ದಾರಿ ತಪ್ಪುವ ಸಾಧ್ಯತೆಯಿದೆ.  ಅನೇಕ ಹಿರಿಯ ಸಾಹಿತಿಗಳ ಪುಸ್ತಕಗಳನ್ನು ಓದಿ ಸ್ಫೂರ್ತಿ ಪಡೆದು ಅವರಂತೆ ಅನುಕರಣೆ ಮಾಡಲು ಪ್ರಯತ್ನ ಪಡುವುದಿದೆ.  ಆದರೆ ಯಾವುದೇ ಕಲೆಗೆ ಇದೊಂದು ಶಿಸ್ತುಬದ್ಧವಾದ ಪ್ರಕ್ರಿಯೆಯಲ್ಲ.  ಉಳಿದ ಕಲೆಗಳಿಗೆ ದೊರಕುವಂತೆ ನಿಯಮಿತವಾದ, ಶಿಸ್ತಿನಿಂದ ಕೂಡಿದ, ಗುರುಗಳ ಮಾರ್ಗದರ್ಶನದಲ್ಲಿ ತರಬೇತಿ ಸಿಕ್ಕಿದ್ದೇ ಆದಲ್ಲಿ ಸಾಹಿತ್ಯ ಇನ್ನೂ ಸುಂದರವಾಗಿ ಅರಳಿ ಬರಬಹುದು.   ಅನೇಕ ದೇಶಗಳಲ್ಲಿ “ಕ್ರಿಯೇಟಿವ್ ರೈಟಿಂಗ್ ಕೋರ್ಸ್” ಎಂಬ ತರಬೇತಿಗಳು ಲಭ್ಯವಿವೆ.  ಅವನ್ನು ನಾವು ಅನುಕರಿಸಬಹುದೇನೋ?  ಯಾವುದೇ ತರಬೇತಿ ಇಲ್ಲದೇ ಕೂಡ ಅಜರಾಮರ ಕೃತಿಗಳನ್ನು ಕೊಟ್ಟಿರುವ ಸಾಹಿತಿಗಳು ನಮ್ಮ ಮಧ್ಯೆ ಇದ್ದಾರೆ.  ಆದರೆ ಈ ರೀತಿ ತರಬೇತಿ ದೊರಕಿದ್ದೇ ಆದಲ್ಲಿ ಮಾರ್ಗದರ್ಶನ, ತರಬೇತಿಯ ಕೊರತೆಯಿಂದ ಬಾಡಿಹೋಗುವ ಪ್ರತಿಭೆಗಳ ಸಂಖ್ಯೆ ಕಡಿಮೆಯಾಗುತ್ತದೆ.  ಅದರಿಂದ ನಾವು ಇನ್ನೂ ಅದ್ಭುತವಾದ ಸಾಹಿತ್ಯವನ್ನು ಆಸ್ವಾದಿಸುವ ಭಾಗ್ಯವನ್ನು ಪಡೆಯಬಹುದೇನೋ ಎಂಬ ಆಶೆ ನನಗೆ.

ಗುರುವಾರ, ಜೂನ್ 14, 2012

ಎಳೆತ
ನನ್ನ ಜೀವನವನೇ ಒಣಗ ಹಾಕಿದ
ಹಗ್ಗ ಕಿತ್ತು ಹೋಯಿತು ಗೆಳತೀ,

ಅಲ್ಲಲ್ಲಿ ಸಿಡಿದ ರಕ್ತ,
ತುಂಬೆಲ್ಲಾ ಹರಡಿದ ಕಣ್ಣೀರು,
ಅವರಿವರು ಕ್ಯಾಕರಿಸಿದ ಉಗುಳು,
ಎಲ್ಲ ಒಣಗಲೆಂದು ತೂಗ ಹಾಕಿದ್ದೆ.

ಜೊತೆಗೊಂದಿಷ್ಟು ಕನಸುಗಳು,
ಅದರಲ್ಲೊಂದು ಮನಸು,
ಆಗಾಗ ಫಳಫಳನೆ ಹೊಳೆವ
ಒಂದಿನಿತು ಮಹಾತ್ವಾಕಾಂಕ್ಷೆಗಳು,
ಕಚಗುಳಿಯಿಡುವ ಆಶೆಗಳು.

ಕಣ್ಣಂಚಿನಲ್ಲಿ ಬೀಡು ಬಿಟ್ಟ
ಕೋಗಿಲೆ ಇಟ್ಟ ತತ್ತಿ
ಗೂಡಲ್ಲಿ ಬಚ್ಚಿ ತೂಗಿದ್ದೆ
ಮಡಚಿದರೆ ಮುರಿದೋಗುವ
ಬಟ್ಟೆಗಳಿಗೆಂದು ಹ್ಯಾಂಗರುಗಳು,
ಯಾವುದೂ ಹಾರಿ ಹೋಗದಿರಲೆಂದು
ಹಚ್ಚಿ ಉಳಿದ ಕ್ಲಿಪ್ಪುಗಳು
ನಾಳೆಗಿರಲೆಂದು ಕೂಡಿ ಜೋಡಿಸಿಟ್ಟ
ಕೊಬ್ಬರಿ ಬಟ್ಟಲುಗಳು, ಉಳ್ಳಾಗಡ್ಡಿ,
ಜೋತು ಬಿದ್ದ ಬಳ್ಳೊಳ್ಳಿ ಗಿಡಗಳು,
ಶ್ರೀಖಂಡ ಮಾಡಲೆಂದು ಕಟ್ಟಿದ ಮೊಸರು,
ಮೊಳಕೆಯೊಡೆಯಲೆಂದು ಹೆಸರುಕಾಳು,
ಎಲ್ಲ ಎಲ್ಲ ಅಪ್ಪಚ್ಚಿಯಾಗಿತ್ತು

ನೀ ರೊಚ್ಚಿಗೆದ್ದು ಎಳೆದ ಎಳೆತಕ್ಕೆ ಗೆಳತಿ,
ನನ್ನ ಜೀವನವನೇ ಒಣಗ ಹಾಕಿದ
ಹಗ್ಗ ಕಿತ್ತು ಹೋಗಿತ್ತು.

....ಪ್ರೀತೀಶ

ಶುಕ್ರವಾರ, ಜೂನ್ 8, 2012

ರಕ್ತದ ರುಚಿ


೨೦೦೩ರಲ್ಲಿ ಬರೆದ ಮತ್ತೊಂದು ಕವನ.


ರಕ್ತ ಎಷ್ಟೊಂದು ಸಿಹಿಯಾಗಿದೆ ಗೆಳೆಯ
ರಕ್ತ ಎಷ್ಟೊಂದು ಸೋವಿಯಾಗಿದೆ.

ಸಪ್ಪೆಯಾಗಿದೆ ಜ್ಯೂಸು, ಕೋಲ್ಡ್ರಿಂಕು,
ಎಳೆನೀರು, ಸೋಡಾ, ಶರಬತ್ತು,
ಕಬ್ಬಿನ ರಸ, ಹಾಲು, ಅಲ್ಕೋಹಾಲು.

ತಿಂದು ತಿಂದು ತುಂಬಿದೆ ಹೊಟ್ಟೆ,
ತುಂಬಿ ತೇಗಿದೆ ಹೊಟ್ಟೆ,
ತೇಗಿದ ಹೊಟ್ಟೆ ಜೀರ್ಣಕ್ಕೆಮಗೆ
ರಕ್ತವೇ ಪಂಚಾಮೃತ.

ಬುಷ್ಷು, ಮುಷ್ಷು, ಬ್ಲೇರು, ಗ್ಲೀರುಗಳಿಗೆಲ್ಲ
ರುಚಿ ಹತ್ತಿದೆ, ನಶೆಯೇರಿದೆ
ಮೈಮನಗಳಲ್ಲಿ ಉರಿಯೆಬ್ಬಿಸಿ
ಹುಯಿಲೆಬ್ಬಿಸಿರುವ ತೀಟೆ ತಣಿಯಬೇಕಿದೆ.
ಬೇಕಾಗಿದೆ, ರಕ್ತ ಬೇಕಾಗಿದೆ.

ಜಾತಿ ಭೇದವಿಲ್ಲ, ಮತಭೇದವಿಲ್ಲ
ದೇಶ, ಭಾಷೆ, ಲಿಂಗ ಭೇದವಿಲ್ಲ
ಪಂಡಿತ, ಪಾಮರ, ಬಡವ, ಬಲ್ಲಿದ
ಒಂದೇ ಬಣ್ಣದ ರಕ್ತ ಭೇದಕ್ಕೆ ಎಡೆಯಿಲ್ಲ.

*****
ನೆರೆಯಿರಲಿ, ಹೊರೆಯಿರಲಿ
ಕಾಲಕೆಳಗಿನ ಭುವಿಯಿಂದ ಚಿಮ್ಮುತಿರಲಿ
ಮುಗಿಲು ಸುರಿಸಲಿ, ನದಿ ಹರಿಸಲಿ,
ನನ್ನ ಹೃದಯ ಕಾರಂಜಿಯೇ ಹೊಮ್ಮುತಿರಲಿ,
ಬೇಕಾಗಿದೆ, ರಕ್ತ ಬೇಕಾಗಿದೆ.

ಚಂದದ ಹುಡುಗೀರ ಕಣ್ಣಲ್ಲಿ,
ಹದಿಹರೆಯದ ಹುಡಗೂರ ಕಣ್ಣಲ್ಲಿ,
ಬೊಚ್ಚ ಬಾಯ ನಗುವಿನ ಮುದಕೀರು,
ಹುಟ್ಟಿದ ಖಬರಿಲ್ಲದ ಕೂಸುಗಳು,
ಅಮ್ಮ, ಅಣ್ಣ, ತಂಗಿ, ಮಗಳ ಕಂಗಳಲ್ಲಿ
ಮನೆಯಲ್ಲಿ, ಮಸೀದಿಯಲಿ,
ಮಂದಿರ, ಬಸದಿ, ಚರ್ಚುಗಳಲ್ಲಿ,
ಕಲ್ಲು, ಮಣ್ಣು, ಗುಡ್ಡ ಬೆಟ್ಟಗಳಲ್ಲಿ
ಹೃದಯದಲಿ, ಗಾಂಧಿ ಫೋಟೋಗಳಲಿ
ಬರೀ ರಕ್ತ, ರಕ್ತ ಚಿಮ್ಮುತಿದೆ.

*****

ಪಿಳಿಪಿಳಿವ ಕಂಗಳಲ್ಲಿ
ಸುಳಿಸುಳಿವ ಬಂಗಳಲ್ಲಿ
ಕುರಿಗಳಲ್ಲಿ, ಹುಲಿಗಳಲ್ಲಿ,
ಗಿಳಿ, ಕೋಗಿಲೆ, ನವಿಲುಗಳಲ್ಲಿ
ಕುದುರೆಗಳಲ್ಲಿ, ಕತ್ತೆಗಳಲ್ಲಿ,
ಕೃಷ್ಣನ ಕೋಟಿ ಅವತಾರಗಳಲ್ಲಿ
ಮಡುವಲ್ಲಿ, ಒಡಲಲ್ಲಿ ಭೀಮದಾಹ,
ಎಂದೆಂದೂ ತೀರದ ಭೀಮದಾಹ.

ರಕ್ತ ಎಷ್ಟೊಂದು ಸಿಹಿಯಾಗಿದೆ ಗೆಳೆಯ
ರಕ್ತ ಎಷ್ಟೊಂದು ಸೋವಿಯಾಗಿದೆ.

ಗುರುವಾರ, ಜೂನ್ 7, 2012

ಕಸದ ಬುಟ್ಟಿಛೀಮಾರಿ ಹಾಕಬೇಡಿ.  ಇದೇನು ಬರೆಯುವಂಥ ವಿಷಯವೇ ಎಂದು ಪ್ರಶ್ನಿಸಬೇಡಿ.  ಪ್ರಶ್ನೆ ಸರಿಯಾದುದೇ.  ಆದರೆ ಉತ್ತರವಿಲ್ಲವಲ್ಲ!  ಏನು ಮಾಡಲಿ ಹೇಳಿ? ಬರೆಯಲು ಎಷ್ಟು ತಿಣುಕಾಡಿದರೂ ಒಂದೂ ವಿಷಯ ಸಿಗಲಿಲ್ಲ.   ಅದಕ್ಕೆ ಕಾಲಬುಡದಲ್ಲಿ ಸಿಕ್ಕ ಬಡಪಾಯಿಯ ಅಪಮಾನ ಮಾಡುವ ದರಿದ್ರ ಕೆಲಸಕ್ಕಿಳಿದಿರುವೆ. ಕ್ಷಮೆಯಿರಲಿ.  ಕ್ಷಮೆ? ಅದಕ್ಕೆ ಅರ್ಹನೇ ನಾನು? ಪ್ರಶ್ನೆಯನ್ನು ಒಂದಿನಿತು ಹೊತ್ತು ಬದಿಗಿಟ್ಟು ಓದಿ ನಂತರ ನಿಮ್ಮ ಉತ್ತರ ನಕಾರಾತ್ಮಕವಾಗಿದ್ದರೆ ಒಂದಿಷ್ಟು ಝಾಡಿಸಿ ಒದೆಯಿರಿ. (ಒದೆ ತಿನ್ನಲು ಎದುರಿಗೆ ನಾನಿಲ್ಲವಲ್ಲ ಎಂದು ಒಳಗೊಳಗೆ ನಾನು ನಕ್ಕುದನ್ನು ತಾವು ನೋಡಿಲ್ಲವೆಂಬುದು ನನ್ನ ಭ್ರಮೆ)

ಇಂಥ ರಸಹೀನ, ಕೊಳಕು, ದರಿದ್ರ ವಸ್ತುವನ್ನು ಆಯ್ದುಕೊಳ್ಳುವಾಗ ಇದನ್ನು ಓದಲು ನೀವು ಆಯ್ದುಕೊಂಡಾಗ ಆದಷ್ಟೇ ನನಗೂ ಅಸಹ್ಯವಾಯಿತು.  ಆದರೆ ಜಗತ್ತಿನ ಕೊಳಕನ್ನೆಲ್ಲ ತನ್ನ ಒಡಲಲ್ಲಿ ಅವಿತಿಟ್ಟುಕೊಂಡ, ಕೆಲವೊಮ್ಮೆ ತೆರೆದುಕೊಂಡ, ಬಹಳಷ್ಟು ಸಾರಿ ಸುತ್ತೆಲ್ಲ ಚೆಲ್ಲಿಕೊಂಡ ಈ ಕಸದ ಬುಟ್ಟಿಯ/ತೊಟ್ಟಿಯ (ಸಂಕ್ಷಿಪ್ತವಾಗಿ ಕ.ಬು.) ಬಗ್ಗೆ ಯೋಚಿಸಲು ತೊಡಗಿದಾಗ ನನಗೆ ಆದ  ಜ್ಞಾನೋದಯದಿಂದ ಬೆಚ್ಚಿ ಇದನ್ನೆಲ್ಲ ತಮ್ಮ ಮುಂದೆ ಕಾರಿಕೊಳ್ಳಲು ಸನ್ನಧ್ಧನಾದೆ.  ಸುಮ್ಮನೆ ವಸ್ತುವಿನ ಬಗ್ಗೆಯೇ ಕಿರಿಕಿರಿ ಮಾಡುವುದನ್ನು ಬಿಟ್ಟು ಏನು ಕೊರೆಯುವುದಿದೆಯೋ ಅದನ್ನು ಕೊರೆದು ಮುಗಿಸಪ್ಪ ಎಂದು ಬೇಜಾರಾಗಬೇಡಿ.

ಕ.ಬು. ನಮ್ಮಂಥ ಹೇಳಹೆಸರಿಲ್ಲದ, ಅಕ್ಷರ ಬರೆಯಲು ಬಂದರೆ ಲೇಖಕನಾದೆ ಎಂಬ ಹುಸಿಗರ್ವದಿಂದ ಮೆರೆವ ಯಾರೂ ಗುರುತಿಸದ ಲೇಖಕರಿಗೆ ಹೊಸದೇನಲ್ಲ.  ಜಗತ್ತಿನಲ್ಲಿ ಎಲ್ಲ ಕ.ಬು.ಗಳೂ ಬಹುಶ: ಅತೀ ಹೆಚ್ಚಾಗಿ ಬೆದರುವ ಕಸವೆಂದರೆ ನಾವು ಬರೆದ ಕವನಗಳು (?), ಕತೆಗಳು (?), ಲೇಖನಗಳು (?).  ಮೊದಲಿಗೆ ಬರೆಯಬೇಕೆಂಬ ಹುಂಬತನದಿಂದ ಎಷ್ಟೆಲ್ಲ ಗುದ್ದಾಡಿ ಒಂದು ವಸ್ತುವನ್ನು ಹುಡುಕಿ, ಅದರ ಬಗ್ಗೆ ಎಷ್ಟೆಲ್ಲ ಯೋಚಿಸಿ, ತಲೆ ಕೆರೆದುಕೊಂಡು, ಎಲ್ಲೆಲ್ಲೋ ತಡಕಾಡಿ ಯಾರಿಗೂ ಗೊತ್ತಾಗದಂತೆ ಹತ್ತಿಪ್ಪತ್ತು ಕವನಗಳಿಂದ ತುಣುಕುಗಳ ತುಡುಗು ಮಾಡಿ, ನಿಘಂಟನ್ನೆಲ್ಲ ಬರಿದು ಮಾಡಿ ಒಂದು ಕವನ ಬರೆಯುವಾಗ ಒಂದೋ ಎರಡೋ ಕ.ಬು.ಗಳು ತುಂಬಿಕೊಂಡಿರುತ್ತವೆ.  ಹೀಗೆ ಕೊನೆಗೂ ಬರೆದು ಮುಗಿಸಿದ ಕವನ ಎಷ್ಟೆಲ್ಲ ಪತ್ರಿಕಾ ಕಾರ್ಯಾಲಯಗಳಿಗೆ ಹೋಗಿ ಅವರಿಗೆ ಹೇಸಿಗೆ ಬಂದು ಒಂದು ಕವನಕ್ಕಾಗಿ ಅವರೂ ಒಂದೋ ಎರಡೋ ಕ.ಬು.ಗಳ ತುಂಬಿ, ಪ್ರಕಟಗೊಂಡ ಕವನಗಳ ಓದಲಾಗದೇ ಓದುಗರು ಇನ್ನೆಷ್ಟೋ ಕ.ಬು. ತುಂಬಿ...  ಅಯ್ಯಯ್ಯೋ ಈ ಕಸದ ಬುಟ್ಟಿಯಷ್ಟು ಸಹನೆ ನಮಗೆ ಇರಬಾರದೇ ಎನಿಸದಿರದು.  ಕ.ಬು.ಗಳು ಇಲ್ಲಿಯವರೆಗೆ ಮುಚ್ಚಿಟ್ಟುಕೊಂಡ ಅತ್ಯಂತ ಹೆಚ್ಚಿನ ಕೊಳಕೂ ಅದೇ ಎಂಬುದು ನನ್ನ ಖಡಾಖಂಡಿತವಾದ ನಂಬುಗೆ.  ಅದು ನಿಜವೆಂದು ಒಪ್ಪಲು ಮನಸ್ಸು ತಯಾರಿಲ್ಲ.  ಕ.ಬು. ಮಾಡುವ ಬಹಳ ಮಹತ್ವದ ಸಮಾಜಸೇವೆಯೇ ಈ ಕೊಳಕನ್ನು ಜನರ ಕಣ್ಣಿನಿಂದ ದೂರ ಇಟ್ಟಿರುವುದು.  ಆ ಪುಣ್ಯದ ಕೆಲಸಕ್ಕಾಗಿ ಕಸದ ಬುಟ್ಟಿ ಯಾವಾಗಲೋ ಸ್ವರ್ಗ ಸೇರಿ ಆರಾಮಾಗಿ ಇರಬಹುದಿತ್ತು.  ಆದರೆ ಜಗತ್ತಿನ ಒಳ್ಳೆಯ ಕೊಳಕೆಲ್ಲ ಧರಣಿ ಹೂಡಿ ಭೂಮಿಯಲ್ಲೇ ಅದನ್ನು ಉಳಿಸಿಕೊಳ್ಳುವಲ್ಲಿ ಯಶಸ್ಸು ಪಡೆದದ್ದು ಯಾವ ಇತಿಹಾಸದಲ್ಲೂ ದಾಖಲಾಗದ ಒಂದು ಕಟುಸತ್ಯ.

ಇಂಥ ಕಸದ ಬುಟ್ಟಿ ಇಲ್ಲದ ಜಗತ್ತನ್ನು ಒಂದು ಸಾರಿ ನಾನು ಕನಸಲ್ಲಿ ಕಂಡೆ.  ಎಲ್ಲಿ ನೋಡಿದಲ್ಲಿ ಕಸವೋ ಕಸ.  ಯಾವುದಾದರೂ ಸ್ವಚ್ಛವಾದ ಜಾಗವನ್ನು ಕಂಡಕೂಡಲೇ ಜನರೆಲ್ಲ ವಾಂತಿ ಮಾಡಿಕೊಳ್ಳುತ್ತಿದ್ದರು.  ಹದಿಹರೆಯದ ಹುಡುಗರು ತಾನು ಮನಸಾರಾ ಪ್ರೀತಿಸಿದ ಹುಡುಗಿಗೆ ಕಸದ ಬುಟ್ಟಿಯನ್ನು ಉಡುಗೊರೆ ಕೊಡುತ್ತಿದ್ದರು.  ಯಾರು ಅತ್ಯಂತ ಹೊಲಸು ಕಸದ ಬುಟ್ಟಿಯನ್ನು ತಂದು ಕೊಡುತ್ತಾರೋ ಅವರಿಗೆ ಹುಡುಗಿಯ ಪ್ರೀತಿ ಮೀಸಲು.  ಅದಕ್ಕಾಗಿ ಹುಡುಗರಲ್ಲಿ ಬಡಿದಾಟವೋ ಬಡಿದಾಟ.  ಕೆಸರು ಎರಚಾಡುವುದು ನಮ್ಮ ದೇಶದ ರಾಷ್ಟ್ರಕ್ರೀಡೆ.  ಕಳೆದ ಮುವತ್ತು ವರ್ಷಗಳಲ್ಲಿ ನಮ್ಮ ದೇಶ ಕೆಸರು ಎರಚಾಟದಲ್ಲಿ ಒಂಭತ್ತು ವಿಶ್ವಕಪ್ಗಳನ್ನು ಗೆದ್ದಿದ್ದರೂ ಎಂಟು ಬಾರಿ ಸತತವಾಗಿ ಸೋತಿದ್ದಕ್ಕೆ ದೇಶದ ತುಂಬಾ ಅದನ್ನು ರಾಷ್ಟ್ರಕ್ರೀಡೆಯ ಪಟ್ಟದಿಂದ ಇಳಿಸಬೇಕು ಎಂಬ ದೊಡ್ಡ ಬೇಡಿಕೆ.  ಇತ್ತೀಚೆಗೆ ದೇಶದ ತುಂಬಾ ಅತ್ಯಂತ ಮಲೀನವಾದ ಪಟ್ಟಣವೆಂಬ ಖ್ಯಾತಿಯನ್ನು ಪಡೆದ ಬೆಂಗಳೂರಿಗೆ ಕೇಂದ್ರ ಸರ್ಕಾರದಿಂದ ರೂ. 5000 ಕೋಟಿ ಅನುದಾನ ಬಿಡುಗಡೆಯಾಗಿತ್ತು.   ಯಾರ ಮನೆಯಲ್ಲಿ ಕಡಿಮೆ ಕಸ ಇದೆಯೋ ಅವರ ಮನೆಗೆ ಪ್ರತಿ ತಿಂಗಳು ರೂ. 300 ಮಾಸಾಶನ ಕೊಡುವ ಸರ್ಕಾರದ ನಿರ್ಧಾರವನ್ನು ದೇಶವೆಲ್ಲ ಶ್ಲಾಘಿಸಿತ್ತು.  ಲಾಠಿಯ ಪೆಟ್ಟೊಂದು ಹೇಳಿಕೊಳ್ಳಲಾಗದ ಜಾಗಕ್ಕೆ ಹೊಡೆಸಿಕೊಂಡ ಮೇಲೆ ನನಗೆ ಎಚ್ಚರಾಗಿತ್ತು.  ಎದ್ದು ಕಣ್ಣು ತಿಕ್ಕಿಕೊಂಡ ಕ್ಷಣ ಮೂಗಿಗೆ ಅಡರಿದ್ದು ದುರ್ನಾತ.  ಆ ರಾತ್ರಿಗೆ ನನ್ನ ಮಂಚವಾಗಿದ್ದು ಕಸದ ತೊಟ್ಟಿ!  ಅಲ್ಲಿಗೆ ಹೇಗೆ ಬಂದೆ ಎಂದು ಕೇಳಿ ನನ್ನ ಜನ್ಮಾಂತರವನ್ನು ಜಾಲಾಡಬೇಡಿ. ಪ್ಲೀಜ್.

ಕಾಲಕ್ಕೆ ತಕ್ಕಂತೆ ನಮ್ಮ ಕಸದ ಬುಟ್ಟಿ ಕೂಡ ಪರಿವರ್ತನೆಗೆ ಒಳಗಾಗಿದೆ.  ಮನೆಯ ಮೂಲೆಯೊಂದರಲ್ಲಿ ಯಾರಿಗೂ ಕಾಣದಂತೆ ಕುಳಿತುಕೊಳ್ಳುತ್ತಿದ್ದ ಕ.ಬು. ಇಂದು ತರಾವರಿ ಬಣ್ಣಗಳಲ್ಲಿ, ಅನೇಕಾನೇಕ ಗಾತ್ರ ಮತ್ತು ವಿನ್ಯಾಸಗಳಲ್ಲಿ, ನೂರೆಂಟು ಚಿತ್ರಗಳನ್ನು ಹೊತ್ತುಕೊಂಡು ಶೃಂಗಾರದ ಸಾಧನೆಯೋ ಎಂಬಂತೆ ಅಂಗಡಿಗಳಲ್ಲಿ ಕಾಣಿಸಿಕೊಂಡು ಕಸದ ಬುಟ್ಟಿಯ ಆಯ್ಕೆಯನ್ನೂ ಗೊಂದಲಮಯ ಮಾಡಿಬಿಟ್ಟಿವೆ.  ಕೆಲವೊಂದು ದೇಶಗಳಲ್ಲಿ ಕಸದ ಬುಟ್ಟಿಯ ಮೇಲೇ ಕಾನೂನುಗಳು ಜಾರಿಯಾಗಿವೆ.  ಪ್ರತಿ ಮನೆಯಲ್ಲಿ ಎರಡು ತರಹದ ಕಸದ ಬುಟ್ಟಿಗಳನ್ನು ಇಡುವುದು ಅವಶ್ಯಕ ಎಂದು ಕಟ್ಟುನಿಟ್ಟು ಮಾಡಲಾಗಿದೆ.  ಒಂದು ಜೈವಿಕ ಕಸದ ಬುಟ್ಟಿ, ಇನ್ನೊಂದು ಅಜೈವಿಕ ಕಸದ ಬುಟ್ಟಿ.  ಅಸ್ಪತ್ರೆಗಳಲ್ಲಿ ಯಾವ ರೀತಿ ಕಸವನ್ನು ಪ್ರತ್ಯೇಕಿಸಬೇಕು, ಕಾರ್ಖಾನೆಗಳಲ್ಲಿ ಯಾವ ರೀತಿ ಕಸವನ್ನು ಸಾಗಿಸಬೇಕು ಎಂಬೆಲ್ಲ ಕಾನೂನುಗಳು ಜನರ ಒಳಿತಿಗೆ ಕಾರಣವಾಗಿವೆ.  ಮನುಷ್ಯರನ್ನು ಕಸವೆಂದು ಪರಿಗಣಿಸದ ಅನೇಕ ದೇಶಗಳು ಈ ಕಾನೂನುಗಳನ್ನು ಅತ್ಯಂತ ಜಾಗರೂಕತೆಯಿಂದ ಜಾರಿಗೊಳಿಸಿವೆ.  ಮಾನವನ ಆರೋಗ್ಯದ ಮೇಲೆ ಅನೇಕ ತರಹದ ಕಸಗಳು ಮಾಡುವ ದುಷ್ಪರಿಣಾಮಗಳನ್ನು ಅರಿತು ಇಂಥ ಕಾನೂನುಗಳನ್ನು ಹುಟ್ಟುಹಾಕಿವೆ ಹಾಗೂ ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಿವೆ.
ಕಣ್ಣಿಗೆ ಕಾಣುವ ಈ ಕಸದ ಬುಟ್ಟಿ ವಿಶ್ವದ ಇನ್ನೂ ಅನೇಕ ತರದ ಕಸದ ಬುಟ್ಟಿಗಳ ಬರೀ ಒಂದು ಪ್ರತಿಶತ ಭಾಗ ಮಾತ್ರ.  ಜಗತ್ತಿನ ತುಂಬೆಲ್ಲ ತುಂಬಿರುವ ಸಾವಿರಾರು ನಮೂನೆಯ ಕ.ಬು.ಗಳು ನಮ್ಮ ಜೀವನವನ್ನು ಹಸನಾಗಿಸಿವೆ ಎಂಬುದರಲ್ಲಿ ಎರಡು ಮಾತಿಲ್ಲ.  ಅದೇ ಉಸಿರಿನಲ್ಲಿ ಆ ಕಸದ ಬುಟ್ಟಿಗಳ ಉಪಯೋಗ ಗೊತ್ತಿಲ್ಲದ ಮೂಢರು ಜಗತ್ತನ್ನು ಮತ್ತಷ್ಟು ಕೊಳಕಾಗಿಸಿದ್ದಾರೆ ಎಂದು ಹೇಳದೇ ಇದ್ದರೂ ತಪ್ಪಾಗುತ್ತದೆ.

ಆ ಸಾಲಿನಲ್ಲಿ ಮೊಟ್ಟಮೊದಲಿಗೆ ನನಗೆ ಹೊಳೆಯುವುದು ನಮ್ಮ ಯೋಚನೆಗಳೆಂಬ ಕಸ.  ಮನುಷ್ಯ ದಿನವಿಡೀ ಮಾಡುವ ಯೋಚನೆಗಳು ಲಕ್ಷಾಂತರ.  ಆದರೆ ಅವುಗಳಲ್ಲಿ ಕೆಲಸಕ್ಕೆ ಬರುವ ಯೋಚನೆಗಳು ಕೇವಲ ಬೆರಳಣಿಕೆಯಷ್ಟು.  ಉಳಿದುವೆಲ್ಲ ನಮ್ಮ ಮರೆವೆಂಬ ಕಸದ ಬುಟ್ಟಿ ತಾನೇ ಸೇರುವವು?  ಆದರೆ ನಾವು ಕಾರ್ಯರೂಪಕ್ಕೆ ತರುವ ಎಲ್ಲ ಯೋಚನೆಗಳು ಉಪಯುಕ್ತವೆಂದು ಹೇಳಿದರೆ ತಪ್ಪಾಗುತ್ತದೆ.  ಅನೇಕ ಕಸಯೋಚನೆಗಳನ್ನು ನಾವು ಕಾರ್ಯರೂಪಕ್ಕೆ ತಂದು ನಮ್ಮ ನೆರೆಹೊರೆ, ಸಂಬಂಧಗಳನ್ನು ಸುತ್ತೆಲ್ಲ ಚೆಲ್ಲುವ ಕಸದ ತೊಟ್ಟಿಗಳನ್ನಾಗಿ ಮಾಡುತ್ತೇವೆ.   ಅಷ್ಟಕ್ಕೆ ನಿಲ್ಲದೇ ಅದೇ ಕಸಯೋಚನೆಗಳನ್ನು ಇತರರಲ್ಲೂ ಬಿತ್ತುತ್ತೇವೆ.  ಅದೇ ಶ್ರೇಷ್ಠವೆಂದು ಜಗಳಕ್ಕೂ ನಿಲ್ಲುತ್ತೇವೆ.  ಒಳ್ಳೆಯ ಯೋಚನೆ ಮಾಡುವುದೇ ಅಪರಾಧ ಎಂಬಂತೆ ಪ್ರತಿಪಾದಿಸುತ್ತೇವೆ.  ಕೊನೆಕೊನೆಗೆ ಕಸಯೋಚನೆಗಳೇ ನಿಜವಾದ ನಮ್ಮ ಸಂಸ್ಕøತಿ ಎಂಬಂತೆ ಬಿಂಬಿಸುತ್ತೇವೆ.  ನಂತರ ಸುವಿಚಾರಗಳ ಕರ್ತೃಗಳೂ ಅವೇ ನಿಜವೆಂದು ನಂಬತೊಡಗುತ್ತಾರೆ.  ಆಮೇಲೆ ಕಸದ ಬುಟ್ಟಿಯೇ ನಮ್ಮ ಶತ್ರುವಾಗುತ್ತದೆ.  ಭ್ರಮೆಯ ಜಾಲದಲ್ಲಿ ನಾವು ಲೀಲಾಜಾಲವಾಗಿ ಸಿಕ್ಕಿಹಾಕಿಕೊಳ್ಳುತ್ತೇವೆ.

ಈಗೆಲ್ಲ ಇನ್ನೊಂದು ಮಹತ್ವದ ಎಲ್ಲರಿಗೂ ಚಿರಪರಿಚಿತ ಕಸದ ಬುಟ್ಟಿಯೆಂದರೆ ನಮ್ಮ ವರ್ಚ್ಯುವಲ್ ಕಸದ ಬುಟ್ಟಿ – ಯಾವ ಗಣಕಯಂತ್ರ ತೆರೆದರೂ ಕಣ್ಣಿಗೆ ರಾಚುವ ರಿಸೈಕಲ್ ಬಿನ್.  ಬಿಲ್ ಗೇಟ್ಸ ಮಹಾಶಯ ಬಹಳ ಜಾಣ. ಅವನು ಅದಕ್ಕೆ ಡಸ್ಟ ಬಿನ್ ಎನ್ನಲಿಲ್ಲ. ರಿಸೈಕಲ್ ಬಿನ್ ಎಂದ.  ಅಂದರೆ ಮರು ಉಪಯೋಗಕ್ಕೆ ಲಾಯಕ್ಕಾಗಿರುವ ಕಸ.  ಅವನಿಗೆ ಗೊತ್ತುಂಟು ಯಾವುದು ಬೇಡವೋ ಅದನ್ನು ನಾವು ನಮ್ಮ ಹಾರ್ಡಡಿಸ್ಕನಲ್ಲಿ ಉಳಿಸಿಕೊಳ್ಳುತ್ತೇವೆ, ಬೇಕಾದುದನ್ನು ಕಸದ ಬುಟ್ಟಿಗೆ ಹಾಕುತ್ತೇವೆ.  ಅದಕ್ಕಾಗಿಯೇ ನಾವು ಎಂಥದನ್ನು ಅಳಿಸಿಹಾಕಿದರೂ ಅದು ನೇರವಾಗಿ ಈ ರಿಸೈಕಲ್ ಬಿನ್ನಿಗೆ ಬಂದು ಬೀಳುತ್ತದೆ.  ಅಳಿಸಿ ಹೋಗುವುದಿಲ್ಲ.  ಮುಂದೆ ಎಂದಾದರೂ ಒಂದು ದಿನ ಅಯ್ಯೋ ನಾನು ಅಳಿಸಿ ಹಾಕಬಾರದಿತ್ತಲ್ಲ ಎಂದು ಪಶ್ಚಾತ್ತಾಪ ಪಡಬೇಕಾದ ಸನ್ನಿವೇಶ ಬಂದಾಗ ರಿಸೈಕಲ್ ಬಿನ್ನಿಗೆ ಹೋಗಿ, ರಿಸ್ಟೋರ್ ಮಾಡಿ.  ನಮ್ಮ ಸಂಬಂಧಗಳಂತಲ್ಲ.  ಒಂದು ಸಾರಿ ಅಳಿಸಿಹಾಕಿದರೆ, ಮುರಿದುಹಾಕಿದರೆ ಮತ್ತೆ ಎಂದೂ ಸಿಗದೇ ಇರುವ ಹಾಗೆ.

ಮನುಷ್ಯ ಇರುವವರೆಗೆ ಮಾತ್ರ (ಅದರಲ್ಲೂ ದುಡಿದು ಯಾರಿಗಾದರೂ ಅನ್ನ ಹಾಕುತ್ತಿದ್ದರೆ ಮಾತ್ರ) ಮನುಷ್ಯ. ಸತ್ತ ಮೇಲೆ ಯಾವಾಗ ಸಾಗ ಹಾಕುವುದೋ ಎಂದು ಕಾತರ ಎಲ್ಲರಿಗೂ.  ಮನೆಯಲ್ಲಿ ಕ.ಬು.ಕ್ಕೆ ಹಾಕಿದ ಕಸ ಹೊರಚೆಲ್ಲುವುದಕ್ಕಿಂತ ಮೊದಲು ಸತ್ತ ಹೆಣವನ್ನು ಸಾಗಿಸುವ ಕೆಲಸವಾಗಬೇಕು.  ಅಂದರೆ ಸತ್ತ ಮೇಲೆ ಮನುಷ್ಯ ಕಸಕ್ಕಿಂತ ಕಡೆ.  ಅಂಥ ಕಡೆಯ ಕಸವನ್ನು ಬಚ್ಚಿಟ್ಟುಕೊಳ್ಳುವ ಕ.ಬು. ಸ್ಮಶಾನ ಭೂಮಿ.  ಈ ಸ್ಮಶಾನ ಭೂಮಿ ಅನೇಕಾನೇಕ ರೋಗಗಳು ಬರದಂತೆ ತಡೆಗಟ್ಟಿದ, ಇಡೀ ಮಾನವ ಕುಲ ಉಳಿಯುವಲ್ಲಿ ಸಹಕರಿಸಿದ ಪುಣ್ಯಭೂಮಿ. ಅದೇನು ಕಸದ ಬುಟ್ಟಿಗೆ ಕಡಿಮೆಯೇ?

ಇನ್ನು ಮುಂದಿನ ನಂಬರು ನಮ್ಮ ಸರ್ಕಾರ ತಯಾರು ಮಾಡುವ ಯೋಜನೆಗಳು.  ಸ್ವಾತಂತ್ರ್ಯ ಬಂದಾಗಿನಿಂದ ಲೆಕ್ಕ ಹಾಕುತ್ತ ಹೋದರೆ ನಮ್ಮ ಸರ್ಕಾರಗಳು ಜಾರಿಗೆ ತರಲು ಪ್ರಯತ್ನಿಸಿದ ಯೋಜನೆಗಳು ಸಾವಿರಾರು.  ಯಾವುದನ್ನೂ ಸರಿಯಾಗಿ ಜಾರಿಗೆ ತರಲಾಗದೇ ಶ್ರೀಸಾಮಾನ್ಯನಿಗೆ ದೊರಕಬೇಕಾದ ಯೋಜನಾ ಸವಲತ್ತುಗಳೆಲ್ಲ ರಾಜಕಾರಣಿಗಳ, ಮಧ್ಯವರ್ತಿಗಳ ಸಂಬಂಧಿಗಳಿಗೆ ದೊರಕಿ ಕೊನೆಗೆ ಈ ಯೋಜನೆ ತನ್ನ ಧ್ಯೇಯೋದ್ದೇಶಗಳನ್ನು ಮುಟ್ಟಲು ವಿಫಲವಾಗಿದೆ ಎಂದು ಕಸದ ಬುಟ್ಟಿಗೆ ಸೇರಿದ ಉದಾಹರಣೆಗಳು ಎಷ್ಟಿಲ್ಲ?  ಅದೇ ರೀತಿ ಸರ್ಕಾರ ಕಸದ ಬುಟ್ಟಿಗೆ ತುಂಬುವ ಮತ್ತೊಂದು ರೀತಿಯ ಕಸವೆಂದರೆ ರಾಜಕಾರಣಿಗಳು ಮಾಡುವ ಹಗರಣಗಳು.  ಯಾರು ಎಷ್ಟೇ ಗುದ್ದಾಡಿ ಹುಡುಕಿ ತೆಗೆದರೂ, ಸಿಬಿಐ, ಪೊಲೀಸರು ಎಷ್ಟೆಲ್ಲ ವಿಚಾರಣೆ ಮಾಡಿದರೂ, ನಮ್ಮ ನ್ಯಾಯಾಲಯಗಳೆಲ್ಲ ಅಗಣಿತ ತೀರ್ಪುಗಳನ್ನು ನೀಡಿದರೂ ಅದು ಕೊನೆಗೆ ಸೇರುವ ಜಾಗ ಕ.ಬು.ವೇ.  ನಂತರದ ನಂಬರ ಬಿಲ್ ಗಳು   ಅದೆಷ್ಟು ತರದ ಕಾನೂನುಗಳನ್ನು ಮಾಡಲು ಸರಕಾರ ವಿಧಾನಸಭೆಯಲ್ಲಿ ಮಂಡಿಸಲಾಗುವ ಅನೇಕ ತರದ ಅಗಣಿತ ಬಿಲ್ಗಳೂ ಕೊನೆಗೆ ಸೇರುವುದು ಕಸದ ಬುಟ್ಟಿಯನ್ನೇ.  ಅದಕ್ಕೆಂದೇ ಎಲ್ಲ ವಿಧಾನಸೌಧಗಳ ಮುಂದೆ ಅಥವಾ ಹಿಂದೆ ಅದೇ ಗಾತ್ರದ ಕಸದ ಬುಟ್ಟಿ ಮಾಡುವುದು ಇಂದಿನ ವೊದಲ ಅವಶ್ಯಕತೆ.

ಕಸದ ಬುಟ್ಟಿ ಸೇರುವ ಇನ್ನೊಂದು ಮಹತ್ವದ ವಸ್ತುವೆಂದರೆ ನಮ್ಮ ತತ್ವಗಳು/ ಮೌಲ್ಯಗಳು.  ಇವೂ ಕೂಡ ಕಸದ ಬುಟ್ಟಿಯ ಬೇಡಿಕೆಯನ್ನು ಹೆಚ್ಚಿಸಲು ಬಹುಮಹತ್ವದ ಕಾರಣ.  ತತ್ವ ಹಾಗೂ ಮೌಲ್ಯಗಳ ಕಾಗುಣಿತವನ್ನೇ ಮರೆತು ಇಂದು ಸ್ವಾರ್ಥವೇ ಯಶಸ್ಸಿನ ಮೂಲ ಮಾನದಂಡ ಎಂದು ಜಗತ್ತನ್ನು ಕಲುಷಿತಗೊಳಿಸುತ್ತಿದ್ದೇವೆ.  ಕಸವನ್ನೇ ರಸವೆಂದು ಶೃಂಗಾರ ಮಾಡಿಕೊಂಡಿದ್ದೇವೆ ನಮ್ಮ ಮನೆಯನ್ನು, ನಮ್ಮ ಮನವನ್ನು ಮತ್ತು ನಮ್ಮ ಜಗವನ್ನು.

ಕಸವೆಂಬುದು ಬರಿ ಕಸವಲ್ಲವೋ, ಅದು ಮನುಜರ ಜೀವನದ ಗೂಢಾರ್ಥವು ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ ಎಂದೆನಿಸುತ್ತದೆ.

ನಾನಿನ್ನು ಓಡುವೆ.  ಯಾರು ಒದೆಯಲು ತಯಾರಾಗಿ ನಿಂತಿದ್ದಾರೆ ಎಂದು ನನಗೆ ಗೊತ್ತಿಲ್ಲ.

ಶನಿವಾರ, ಜೂನ್ 2, 2012

ನಾಯಕ


ಸೂರ್ಯ ಬಂದದ್ದೇ ತಡವಾಗಿ,
ನಮ್ಮನೆಯ ಗ್ರಿಲ್ ಮುರಿದು
ತುಡುಗಾಗಿ ಹೋಗಿ,
ಹರೆಯದ ಹೆಣ್ಣು ಬೊಬ್ಬಿಟ್ಟು ಕೂಗಿ
ಗಟಾರಿನಲ್ಲೆಲ್ಲ ರಕ್ತವೇ ಹರಿದೋಗಿ,
ಹುಲ್ಲ ಮೇಲಿನ ಮಂಜೆಲ್ಲಾ ಕರಗಿ
ಸೂರ್ಯಾ ಬಂದದ್ದೇ ತಡವಾಗಿ.

ಹಕ್ಕಿಸಂಕುಲವೆಲ್ಲ, ಪುಷ್ಪರಾಜಿಗಳೆಲ್ಲ
ಕೌತುಕದಿ ಕಾದು,
ಹೆಣ್ಣು ನೀರುಗ್ಗಿ ರಂಗೋಲಿ ಹಿಡಿದು
ಹೊಟೇಲು, ಬೂತಿನ ಮಾಲೀಕರೆಲ್ಲ
ಸ್ನಾನ ತಿಂಡಿ ಮಾಡಿ
ರೈತ ನೇಗಿಲು ಹೊತ್ತು ಎತ್ತುಗಳ ಹೂಡಿ
ಕೋಳಿ ಕೂಗಿ ಕೂಗಿ ಬೆಚ್ಚಿ
ಜಗದ ಕಂಗಳೆಲ್ಲ ತೆರೆತೆರೆದು ಮುಚ್ಚಿ
ವರ್ಷ ವರ್ಷ ಉರುಳಿ
ಸೂರ್ಯಾ ಬಂದದ್ದೇ ತಡವಾಗಿ.

ಬಂದವನೇ ಬೆಳಕಿನ ಕಾಲರಿಗೆ ಕೈಹಾಕಿ
‘ಯಾಕಯ್ಯೋ ನನಗಿಂತ ಲೇಟಾಗಿ ಬಂದಿ.’

ಏರಿ, ಮೇಲೇರಿ
ಗುಡ್ಡ ಬೆಟ್ಟ ಕಣಿವೆ ಕಾಡುಗಳ
ಹೊಕ್ಕಲಾರದೆ ಬೆವರಿ,
ಅಡ್ಡಡ್ಡ ಬರುವ ಮೋಡನ
ಸೈರಿಸಲಾಗದೆ ಕೆರಳಿ
ಏರುವ ಭ್ರಮೆಯಲ್ಲಿ
ಇಳಿಯುತ್ತಾ ಸಾಗಿ,
ಕೈಲಾಗದ ಹತಾಶೆಗೆ ತಲೆ ಚಚ್ಚಿಕೊಂಡು
ಚೆಲ್ಲಿದ ರಕ್ತ ಕಂಡು ಅಳುತ್ತ ಕೂತ.

ಸೂರ್ಯಾ ಬಂದದ್ದೇ ತಡವಾಗಿ.