ಗದ್ದಲಕ್ಕೆ ನನ್ನ ಛೀಮಾರಿ
ಏಕನಾದದಿ ಹೊರಡುವ ಸೊಳ್ಳೆ ಸಂಗೀತವೂ ಆಹ್ಲಾದಕಾರಿ
ಎಂದು ಸಾಯುವೆನೋ ತಿಳಿಯದು ಎಂದು
ನಾಳೆ ನಾಡಿದ್ದುಗಳ ಚಾಪೆಯ ಮೇಲೆ ಸುರಿದು
ಅಂಚನ್ನು ಎದೆತಂಕ ಎಳೆದು ತಿಂದುಬಿಡುವ ಕಾತರಕೆ
ಹೊಟ್ಟೆಯ ಹಸಿವು ಸಾಕಾಗುವುದಿಲ್ಲ.
ಇದ್ದ ಎಣ್ಣೆಯನ್ನೆಲ್ಲ ಭಾವದೀಪ್ತಿಯಲಿ ಸುರುವಿ
ಬೆಳಕನು ಹೊದ್ದು ಗಡದ್ದು ನಿದ್ದೆ
ಬೆಳಿಗ್ಗೆ ಎದ್ದಾಗ ಸುತ್ತೆಲ್ಲ ಕತ್ತಲು.
ಗದ್ದಲಕ್ಕೆ ನನ್ನ ಛೀಮಾರಿ.
ನಿರ್ದಯ ದೈವದ ಎದುರು ಮುಗಿದ ಕೈಗಳು
ಇರುವೆಗಳು ಕಚ್ಚಿ ಸಕ್ಕರೆ ಪೊಟ್ಟಣ ಖಾಲಿ
ಎದೆಯ ಬೇಗೆ ಶಬ್ದಗಳ ಮುಷ್ಠಿಗೆ ಸಿಗದೇ ಜಾರಿ
ಖಾಲಿ ಪುಟದ ತುಂಬೆಲ್ಲಾ ರಾಡಿ
ಅತಿರಥ ಮಹಾರಥ ಭಗೀರಥ ಪ್ರಯತ್ನ
ಆಕಾಶಕ್ಕೆ ಏರಿದ ಮಣ್ಣಿನ ಪರ್ವತ
ಮೂಲೆಯಲ್ಲಿ ಇರುವೆಗಳ ಮುದ್ದಿನಾಟ
ಕಣ್ಣಿಗೆ ಕಾಣದೆ ವಿಜಯ ದುಂದುಭಿ ಝೇಂಕಾರ
ಗಡಚಿಕ್ಕುವ ಕಾಂಕ್ರೀಟು ಕಾಡುಗಳ ಮಧ್ಯೆ
ತೊನೆದಾಡುವ ಮರಗಳೂ ಚೀರಾಡುತ್ತವೆ
ಸೌಂದರ್ಯ ಧಗಧಗಿಸಿ ಕಣ್ಣ ನೋಯಿಸುತ್ತದೆ
ಕೋಗಿಲೆಯ ಸವಿಗಾನ ಆರ್ತನಾದವೆನಿಸುತ್ತದೆ
ಗದ್ದಲಕ್ಕೆ ನನ್ನ ಛೀಮಾರಿ.
ಸಂಬಂಧಗಳ ನಾತ ನೆತ್ತಿಗೇರಿ
ಪ್ರೇಮಕ್ಕೂ ಕಾಮಕ್ಕೂ ರಾತ್ರಿಯಿಡಿ ಸೆಣಸಾಟ
ಸ್ನೇಹ ಸ್ವಾರ್ಥ ನಂಬಿಕೆಗಳ ತಿಣುಕಾಟ
ಕಣ್ಣೀರಿಗೂ ಖೊಳ್ಳನಗೆಗೂ ಕಣ್ಣುಮುಚ್ಚಾಲೆಯಾಟ
ಹಡ್ಡುವ ಪ್ರತಿ ಖೆಡ್ಡದಲಿ ನಿಧಿಯ ಹುಡುಕಾಟ
ಗದ್ದಲಕ್ಕೆ ನನ್ನ ಛೀಮಾರಿ.
ಕನ್ನಡ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕನ್ನಡ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಶನಿವಾರ, ಸೆಪ್ಟೆಂಬರ್ 15, 2012
ಶನಿವಾರ, ಸೆಪ್ಟೆಂಬರ್ 8, 2012
ಮಳೆ ಬರಲೇ ಇಲ್ಲ
ನಡುದಾರಿಯಲಿ ಗುಂಡಿ ತೋಡಿ
ಮಳೆಗೆ ಗೊಳೆಯಾಗುವ ನೀರು ನನದೆಂದು
ಕಾದು ಕೂತಿರುವೆ
ಟ್ರಕ್ಕು, ಲಾರಿ, ದೆವ್ವದ ಮೋಟಾರುಗಳ ತಂದು
ನುಣ್ಣನೆ ಸಿಮೆಂಟಿನ ರೋಡು ಹಾಸಿದರು
ಮಳೆ ಬರಲೇ ಇಲ್ಲ
ಹಸಿದ ಹೊಟ್ಟೆಯ ಒಳಗೆ ಬರದು ಶಂಖನಾದ
ತುಂಬಿದ ಹೊಟ್ಟೆಯಲಿ ತಿಂಗಳುಗಟ್ಟಲೆ
ಕಷ್ಟ ನೋವುಗಳ ತರಬೇತಿ ಪಡೆದವರು
ಮಾತ್ರ ಊದಬಹುದು ಕದನಕಹಳೆ
ಮದುವೆಯಾಗದಿರುವುದು ಸರಿಯಾದ ನಿರ್ಧಾರ
ನಾವೆಲ್ಲಾ ನಿರ್ಧಾರ ಮಾಡಲಾಗದವರು
ಕಹಿಯುಪ್ಪು, ಹುಳಿದಾರ ಹೃದಯ ಬಾಣಲೆಯಲಿ ಕುದಿದು
ಪುಪ್ಪುಸಕ್ಕೆ ಬರೀ ಬೆವರಿನ ವಾಸನೆ
ನೆಲದ ನಂಟು ಸಾಕೆಂದು ಸಮುದ್ರಕ್ಕೆ ಧುಮುಕಿದರೆ
ನೀರೆಲ್ಲ ಜೀವಗಾಳಿಯಾಗಿ ಮುಟ್ಟಿದ್ದು ಮತ್ತೊಂದು ನೆಲ
ಕಾವೆಲ್ಲ ಖಾಲಿಯಾಗಿ ಎದೆಯ ನೀಲಿಯಲ್ಲಿ
ಚಂದ್ರನಿಗೆ ಹಸಿವಾಗಿ ನಕ್ಷತ್ರಗಳೆಲ್ಲ ಮಾಯ.
ಮಳೆಗೆ ಗೊಳೆಯಾಗುವ ನೀರು ನನದೆಂದು
ಕಾದು ಕೂತಿರುವೆ
ಟ್ರಕ್ಕು, ಲಾರಿ, ದೆವ್ವದ ಮೋಟಾರುಗಳ ತಂದು
ನುಣ್ಣನೆ ಸಿಮೆಂಟಿನ ರೋಡು ಹಾಸಿದರು
ಮಳೆ ಬರಲೇ ಇಲ್ಲ
ಹಸಿದ ಹೊಟ್ಟೆಯ ಒಳಗೆ ಬರದು ಶಂಖನಾದ
ತುಂಬಿದ ಹೊಟ್ಟೆಯಲಿ ತಿಂಗಳುಗಟ್ಟಲೆ
ಕಷ್ಟ ನೋವುಗಳ ತರಬೇತಿ ಪಡೆದವರು
ಮಾತ್ರ ಊದಬಹುದು ಕದನಕಹಳೆ
ಮದುವೆಯಾಗದಿರುವುದು ಸರಿಯಾದ ನಿರ್ಧಾರ
ನಾವೆಲ್ಲಾ ನಿರ್ಧಾರ ಮಾಡಲಾಗದವರು
ಕಹಿಯುಪ್ಪು, ಹುಳಿದಾರ ಹೃದಯ ಬಾಣಲೆಯಲಿ ಕುದಿದು
ಪುಪ್ಪುಸಕ್ಕೆ ಬರೀ ಬೆವರಿನ ವಾಸನೆ
ನೆಲದ ನಂಟು ಸಾಕೆಂದು ಸಮುದ್ರಕ್ಕೆ ಧುಮುಕಿದರೆ
ನೀರೆಲ್ಲ ಜೀವಗಾಳಿಯಾಗಿ ಮುಟ್ಟಿದ್ದು ಮತ್ತೊಂದು ನೆಲ
ಕಾವೆಲ್ಲ ಖಾಲಿಯಾಗಿ ಎದೆಯ ನೀಲಿಯಲ್ಲಿ
ಚಂದ್ರನಿಗೆ ಹಸಿವಾಗಿ ನಕ್ಷತ್ರಗಳೆಲ್ಲ ಮಾಯ.
ಭಾನುವಾರ, ಜೂನ್ 24, 2012
ಸಾಹಿತ್ಯ ತರಬೇತಿ
ಹಿಂದಿನ ಒಂದು ವಾರದಲ್ಲಿ ಎರಡು ಪುಸ್ತಕಗಳನ್ನು ಓದಿದೆ. ಒಂದು ರಹಮತ ತರೀಕೆರೆಯವರ “ಅಂಡಮಾನ್ ಕನಸು”, ಎರಡು ಸ್ಪೇನಿನ ಗ್ಯಾಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಜ್ ಅವರ “ಲವ್ ಇನ್ ದ ಟೈಮ್ ಆಫ್ ಕಾಲರಾ”. ಇಂದು ಬೆಳಿಗ್ಗೆ ‘ವಿಜಯವಾಣಿ’ಯಲ್ಲಿ ಎಸ್.ಎಲ್.ಭೈರಪ್ಪನವರ ಸಂದರ್ಶನ ಓದಿದೆ. ಅವರೆಲ್ಲ ಬರೆವ ಪರಿ, ಅವರ ಯೋಚನಾ ಶಕ್ತಿ, ಆಡುವ ಮಾತುಗಳು ನಾನು ತೃಣಕ್ಕೆ ಸಮಾನ ಎಂಬುದನ್ನು ಸಾರಿ ಹೇಳಿದಂತಿತ್ತು. ರವೀಂದ್ರನಾಥ ಟ್ಯಾಗೋರ, ಶಿವರಾಮ ಕಾರಂತ, ಕುವೆಂಪು, ಬೇಂದ್ರೆ ಇವರೆಲ್ಲ ಜೊತೆಗೆ ನೆನಪಿಗೆ ಬಂದು ಅವರು ಏರಿದ ಉತ್ತುಂಗ ನಾನು ಕಾಣಲು ಸಾಧ್ಯವೇ ಎಂಬ ಪ್ರಶ್ನೆ ಹುಟ್ಟಿಸಿದವು.
ಅಂಥ ಸಾಧನೆಗಳನ್ನು ಮಾಡಬೇಕಾದರೆ ತಪಸ್ಸು ಮಾಡಬೇಕಾಗುತ್ತದೆ. ಎಷ್ಟೆಲ್ಲ ಓದು, ಎಷ್ಟೆಲ್ಲ ಅನುಭವ, ಅಲೆದಾಟ, ಪರಿಶ್ರಮ ಬೇಕು ಎಂದೆಲ್ಲ ಅನಿಸತೊಡಗಿತು. ವರ್ಷಾನುಗಟ್ಟಲೆ ಸಂಗೀತದ ರಿಯಾಜ್ ಮಾಡುವಂತೆ ಸಾಹಿತ್ಯದ ಅಭ್ಯಾಸ ಮಾಡಬೇಕು, ಅನೇಕಾನೇಕ ಪ್ರಯೋಗಗಳನ್ನು ಮಾಡಬೇಕು, ಬರೆಯುವ ರೂಢಿ ಮಾಡಿಕೊಳ್ಳಬೇಕು. ಸಾಹಿತ್ಯವನ್ನು ಸಂಗೀತದೊಡನೆ ಹೋಲಿಸುವಾಗ ಇನ್ನು ಉಳಿದ ಕಲಾಪ್ರಕಾರಗಳೂ ಕೂಡ ಹಾಗೆಯೇ ಎಂಬ ಜ್ಞಾನೋದಯವಾಯಿತು. ಯಾವುದೇ ಕಲೆಯನ್ನು ಎತ್ತಿಕೊಂಡರೂ ಉದಾ: ನಟನೆ, ನೃತ್ಯ, ಚಿತ್ರಕಲೆ, ಸಂಗೀತ, ಸಾಹಿತ್ಯ ಇವುಗಳಿಗೆಲ್ಲ ನಿರಂತರ ಪ್ರಯತ್ನ, ಪರಿಶ್ರಮ, ನಿಷ್ಠೆ, ತಾಳ್ಮೆ, ಉತ್ಕಟೇಚ್ಛೆ, ಅಪಾರವಾದ ಪ್ರೀತಿ ಇವುಗಳು ಬೇಕು. ಜೊತೆಗೆ ಒಬ್ಬ ಗುರುಗಳ ಮಾರ್ಗದರ್ಶನ, ತರಬೇತಿ ಕೂಡ ಅವಶ್ಯಕ. ಸಾಹಿತ್ಯ ಒಂದನ್ನುಳಿದು ಮಿಕ್ಕ ಕಲಾಪ್ರಕಾರಗಳಿಗೆಲ್ಲ ತರಬೇತಿ ಸಿಗುತ್ತದೆ. ಆದರೆ ಸಾಹಿತ್ಯಕ್ಕೆ ಪ್ರತ್ಯೇಕವಾದ ತರಬೇತಿ ನಮ್ಮ ದೇಶದಲ್ಲಿ ಇದ್ದಂತಿಲ್ಲ.
ಜೀವನದ ಯಾವುದೋ ಒಂದು ಪ್ರಸಂಗದಲ್ಲಿ, ಎಲ್ಲಿಯೋ ಸ್ಫೂರ್ತಿ ಪಡೆದು ಕತೆ, ಕವಿತೆ ಬರೆಯಲು ಪ್ರಾರಂಭಿಸುತ್ತೇವೆ. ಬರೆದವುಗಳನ್ನು ಗೆಳೆಯರಿಗೆ ತೋರಿಸಿ ಹೊಗಳಿಕೆ ಗಿಟ್ಟಿಸಿಕೊಳ್ಳುತ್ತೇವೆ. ನಂತರ ಸ್ವಲ್ಪ ಧೈರ್ಯ ಬಂದು ಸಮೀಪದಲ್ಲಿ ಸಿಗುವ ಹಿರಿಯ ಸಾಹಿತಿಗಳ ಮುಂದೆ ಬರೆದುದನ್ನು ಚಾಚುತ್ತೇವೆ. ಅವರ ಸಲಹೆ, ಸೂಚನೆ, ಮಾರ್ಗದರ್ಶನ ದೊರೆತರೆ ಅನೇಕ ಸುಧಾರಣೆಗಳನ್ನು ಮಾಡಿಕೊಳ್ಳುತ್ತೇವೆ. ಈಗೀಗ ಅಂತರ್ಜಾಲದ ಸಹಾಯದಿಂದ ಬ್ಲಾಗಗಳಲ್ಲಿ, ಫೇಸಬುಕ್ ತಾಣಗಳಲ್ಲಿ ಪ್ರಕಟಿಸಿ ಮತ್ತಷ್ಟು ಹೊಗಳಿಕೆ, ಪ್ರೇರಣೆ ಪಡೆಯುತ್ತೇವೆ. ನಂತರ ಇನ್ನೊಂದಿಷ್ಟು ಆತ್ಮವಿಶ್ವಾಸ ಮೂಡಿ ಪತ್ರಿಕೆಗಳಿಗೆ ಕಳುಹಿಸಿಕೊಡುತ್ತೇವೆ. ಅಲ್ಲಿ ಪ್ರಕಟವಾದರೆ ತಾನೊಬ್ಬ ಸಾಹಿತಿ ಎಂದು ನಂಬಲು ಶುರುಮಾಡುತ್ತೇವೆ.
ಆದರೆ ಈ ರೀತಿಯಾಗಿ ಅಡ್ಡಾದಿಡ್ಡಿಯಾಗಿ ಬೆಳೆವ ಸಾಹಿತ್ಯ ಎಲ್ಲಿಯೋ ಒಂದು ಕಡೆಗೆ ಎಡವಿ ನಿಂತುಬಿಡುವ ಅಪಾಯವಿದೆ. ಸರಿಯಾದ ಮಾರ್ಗದರ್ಶನ ಸಿಗದೆ ದಾರಿ ತಪ್ಪುವ ಸಾಧ್ಯತೆಯಿದೆ. ಅನೇಕ ಹಿರಿಯ ಸಾಹಿತಿಗಳ ಪುಸ್ತಕಗಳನ್ನು ಓದಿ ಸ್ಫೂರ್ತಿ ಪಡೆದು ಅವರಂತೆ ಅನುಕರಣೆ ಮಾಡಲು ಪ್ರಯತ್ನ ಪಡುವುದಿದೆ. ಆದರೆ ಯಾವುದೇ ಕಲೆಗೆ ಇದೊಂದು ಶಿಸ್ತುಬದ್ಧವಾದ ಪ್ರಕ್ರಿಯೆಯಲ್ಲ. ಉಳಿದ ಕಲೆಗಳಿಗೆ ದೊರಕುವಂತೆ ನಿಯಮಿತವಾದ, ಶಿಸ್ತಿನಿಂದ ಕೂಡಿದ, ಗುರುಗಳ ಮಾರ್ಗದರ್ಶನದಲ್ಲಿ ತರಬೇತಿ ಸಿಕ್ಕಿದ್ದೇ ಆದಲ್ಲಿ ಸಾಹಿತ್ಯ ಇನ್ನೂ ಸುಂದರವಾಗಿ ಅರಳಿ ಬರಬಹುದು. ಅನೇಕ ದೇಶಗಳಲ್ಲಿ “ಕ್ರಿಯೇಟಿವ್ ರೈಟಿಂಗ್ ಕೋರ್ಸ್” ಎಂಬ ತರಬೇತಿಗಳು ಲಭ್ಯವಿವೆ. ಅವನ್ನು ನಾವು ಅನುಕರಿಸಬಹುದೇನೋ? ಯಾವುದೇ ತರಬೇತಿ ಇಲ್ಲದೇ ಕೂಡ ಅಜರಾಮರ ಕೃತಿಗಳನ್ನು ಕೊಟ್ಟಿರುವ ಸಾಹಿತಿಗಳು ನಮ್ಮ ಮಧ್ಯೆ ಇದ್ದಾರೆ. ಆದರೆ ಈ ರೀತಿ ತರಬೇತಿ ದೊರಕಿದ್ದೇ ಆದಲ್ಲಿ ಮಾರ್ಗದರ್ಶನ, ತರಬೇತಿಯ ಕೊರತೆಯಿಂದ ಬಾಡಿಹೋಗುವ ಪ್ರತಿಭೆಗಳ ಸಂಖ್ಯೆ ಕಡಿಮೆಯಾಗುತ್ತದೆ. ಅದರಿಂದ ನಾವು ಇನ್ನೂ ಅದ್ಭುತವಾದ ಸಾಹಿತ್ಯವನ್ನು ಆಸ್ವಾದಿಸುವ ಭಾಗ್ಯವನ್ನು ಪಡೆಯಬಹುದೇನೋ ಎಂಬ ಆಶೆ ನನಗೆ.
ಶನಿವಾರ, ಜೂನ್ 2, 2012
ನಾಯಕ
ಸೂರ್ಯ ಬಂದದ್ದೇ ತಡವಾಗಿ,
ನಮ್ಮನೆಯ ಗ್ರಿಲ್ ಮುರಿದು
ತುಡುಗಾಗಿ ಹೋಗಿ,
ಹರೆಯದ ಹೆಣ್ಣು ಬೊಬ್ಬಿಟ್ಟು ಕೂಗಿ
ಗಟಾರಿನಲ್ಲೆಲ್ಲ ರಕ್ತವೇ ಹರಿದೋಗಿ,
ಹುಲ್ಲ ಮೇಲಿನ ಮಂಜೆಲ್ಲಾ ಕರಗಿ
ಸೂರ್ಯಾ ಬಂದದ್ದೇ ತಡವಾಗಿ.
ಹಕ್ಕಿಸಂಕುಲವೆಲ್ಲ, ಪುಷ್ಪರಾಜಿಗಳೆಲ್ಲ
ಕೌತುಕದಿ ಕಾದು,
ಹೆಣ್ಣು ನೀರುಗ್ಗಿ ರಂಗೋಲಿ ಹಿಡಿದು
ಹೊಟೇಲು, ಬೂತಿನ ಮಾಲೀಕರೆಲ್ಲ
ಸ್ನಾನ ತಿಂಡಿ ಮಾಡಿ
ರೈತ ನೇಗಿಲು ಹೊತ್ತು ಎತ್ತುಗಳ ಹೂಡಿ
ಕೋಳಿ ಕೂಗಿ ಕೂಗಿ ಬೆಚ್ಚಿ
ಜಗದ ಕಂಗಳೆಲ್ಲ ತೆರೆತೆರೆದು ಮುಚ್ಚಿ
ವರ್ಷ ವರ್ಷ ಉರುಳಿ
ಸೂರ್ಯಾ ಬಂದದ್ದೇ ತಡವಾಗಿ.
ಬಂದವನೇ ಬೆಳಕಿನ ಕಾಲರಿಗೆ ಕೈಹಾಕಿ
‘ಯಾಕಯ್ಯೋ ನನಗಿಂತ ಲೇಟಾಗಿ ಬಂದಿ.’
ಏರಿ, ಮೇಲೇರಿ
ಗುಡ್ಡ ಬೆಟ್ಟ ಕಣಿವೆ ಕಾಡುಗಳ
ಹೊಕ್ಕಲಾರದೆ ಬೆವರಿ,
ಅಡ್ಡಡ್ಡ ಬರುವ ಮೋಡನ
ಸೈರಿಸಲಾಗದೆ ಕೆರಳಿ
ಏರುವ ಭ್ರಮೆಯಲ್ಲಿ
ಇಳಿಯುತ್ತಾ ಸಾಗಿ,
ಕೈಲಾಗದ ಹತಾಶೆಗೆ ತಲೆ ಚಚ್ಚಿಕೊಂಡು
ಚೆಲ್ಲಿದ ರಕ್ತ ಕಂಡು ಅಳುತ್ತ ಕೂತ.
ಸೂರ್ಯಾ ಬಂದದ್ದೇ ತಡವಾಗಿ.
ಭಾನುವಾರ, ಮಾರ್ಚ್ 25, 2012
ಇದು ನಾನಲ್ಲ..
ವರುಷಗಳೇ ಉರುಳಿ ಹೋಗಿ
ಕನ್ನಡಿಯ ಎದುರಿಗೆ ನಿಂತ ಒಡನೆ
ಹೊಳೆದದ್ದು ಎರಡೇ ಪದ
ಇದು ನಾನಲ್ಲ...
ಅಡ್ಡಾದಿಡ್ಡಿ ಬೆಳೆದ ದಾಡಿ
ಮೂಗ ಹೊಳ್ಳೆಯಿಂದ ಅಸಹ್ಯ ಕೂದಲು
ಗುಳಿ ಬಿದ್ದ ಕಣ್ಣುಗಳಲ್ಲಿ ಹೇಸಿಗೆ ಪಿಚ್ಚು
ಶೋಕಿಗೆ ಇಳಿಬಿಟ್ಟ ಕೂದಲಲ್ಲಿ ಭಯದ ಜಿಡ್ಡು
ಭಾವನೆಗಳೆಲ್ಲ ಅಳಿದು ಹೋಗಿ
ಖಾಲಿಯಾದ ಟೈಯ ಎಡಭಾಗದಲಿ
ಫ್ಯಾನಿನ ಗಾಳಿಗೆ ಹಾರಾಡುವ ಅಂಗಿ
ಕೂಡ ಒಸರಿದ್ದು ಇದು ನಾನಲ್ಲ...
ಸೌಂದರ್ಯ ಕಂಡು ಭಯಬಿದ್ದು
ಗುಲಾಬಿ ಗಿಡದಲ್ಲಿ ಬರಿ ಮುಳ್ಳು ಕಂಡು
ಪ್ರೀತಿಯ ಪದ ಉಸುರುವ ಮುನ್ನ
ಗಣಿತದ ಸೂತ್ರಗಳ ನೆನಪು ಕಾಡಿ
ಜಗದ ಹೃದಯಸುಮವ ತಡಕಿ
ಗಾಳಿಯಲ್ಲೂ ಸಂಗೀತ ಹುಡುಕಿ
ಜಡಿವ ಮಳೆಯಲಿ ನೃತ್ಯ ಕಂಡ
ಮನಕೆ ಬೀಗ ಬಿದ್ದಿದೆ ಇದು ನಾನಲ್ಲ...
ಹರಿವೆಗುಂಟ ತೇಲಿದ ಎಲೆ
ಕಾಂಡಕೆ ಸುತ್ತಿಕೊಂಡ ಲತೆ
ಬೆಂಕಿಗೆ ಬೂದಿಯಾದ ಹಾಳೆ
ಬೆಳಕ ಹಿಂಬದಿಯ ನೆರಳು
ಬದುಕಿನ ಬಲಾತ್ಕಾರ ಸಹಿಸಿ
ಸಾವ ವಿರಹ ಬೇಗುದಿಲಿ ತೊಳಲಿ
ಪ್ರೀತಿ ಭಾವ ಕರುಣೆ ಕಮರಿ
ಬರಿ ಮಾಂಸ ಖಂಡಗಳ ಗೂಡಿದು ನಾನಲ್ಲ..
...ಪ್ರವೀಣ
ಶನಿವಾರ, ಮಾರ್ಚ್ 10, 2012
ಕಾಗೆಯ ಮಲ

ಅರ್ಧ ಕಿಲೋಮೀಟರ್ ಸನಿಹ ಸೂರ್ಯ
ಸಾವಿರ ಕಿಲೋಮೀಟರ್ ದೂರ ಜೀವ
ಭೂಮಂಡಲದ ಮಟಾಮಧ್ಯದಲ್ಲಿ
ಬಟಾಬಯಲಿನಲಿ ಅಲೆಯುತಿದ್ದೆ
ದಿಕ್ಕುಗಳು ಮಿಥ್ಯೆಯೆಂದು ಸಾಧಿಸುತ
ತಲೆಯ ಮೇಲೆ, ಕಿವಿಗಳ ಮೇಲೆ
ಮೇಣ್ ಬೆನ್ನ ಮೇಲೆ ಪತ್ ಎಂದು ಬಿತ್ತು
ಬೆರಳಲಿ ಹಿಡಿದು ನೋಡಿದರೆ ಕಾಗೆಯ ಮಲ
ಅಖಂಡ ಬ್ರಹ್ಮಾಂಡವೆಲ್ಲ ಅಲೆದು
ಅತಳ ವಿತಳ ಪಾತಾಳಗಳ ಹೊಕ್ಕು
ಹುಡುಕಿ ತುಂಡು ತುಂಡು ಮಾಡುವವರೆಗೆ ನಿನ್ನ
ಹನಿ ನೀರ ಮುಟ್ಟಲಾರೆನೆಂಬ ಪಣ ತೊಟ್ಟೆ
ಆಕ್ರೋಶದಾ ಅತಿಶಯದ ಘಳಿಗೆಯಲಿ
ಮೇಲೆ ನೋಡಿದರೆ ಸೂರ್ಯನೇ ಏಕಾಂಗಿ
ಕಣ್ಣು ಹರಿದಷ್ಟು ದೂರ ಗಾಳಿಯ ಪತ್ತೆಯಿಲ್ಲ
ಸೋಲೆಂಬುದೆನ್ನ ನಿಘಂಟಿನಲೇ ಇಲ್ಲ
ತೊಟ್ಟ ಪಣ ಮುಟ್ಟುವವರೆಗೆ ನಿದ್ದಿಲ್ಲ ನೀರಡಿಕೆಯಿಲ್ಲ
ಗಿಡ ಮರ ಕೊಂಬೆ ಬಾಗಿಲು ಕಿಟಕಿ
ಗುಡಿ ಗುಂಡಾರ ಅಂಗಡಿ ಭಂಡಾರ
ನದಿ ತೊರೆ ಭಾವಿ ಸಾಗರದಾಳ
ಸೂರ್ಯ ಚಂದ್ರ ನಕ್ಷತ್ರ ಗ್ರಹಗಳ
ಮನುಜ ಮತಿಯ ಕಲ್ಪನೆಯ ತಾಣಗಳ
ಎವೆಯಿಕ್ಕದೆ ಬೆನ್ನು ಹಚ್ಚದೆ ಅರಸಿದೆ
ನಾಚಿಕೆಯಿಲ್ಲದ ಹಸಿವು ಮಾನವಿಲ್ಲದ ದಣಿವು
ಮಾತುಗಳ ಗೌರವವೆನಿತಿಲ್ಲದ ನೀರಡಿಕೆ
ಕಾಗೆಯ ವಿಳಾಸ ಸಿಗುವ ಮೊದಲೇ
ನನ್ನ ಪ್ರಾಣ ತೆಗೆವ ಸಂಚು ಹೂಡಿದಂತೆ
ಧಸಕ್ಕನೆ ಮನೆಯೆಂಬೋ ಮನೆ ಸೇರಿದೆ
ಹಿತ್ತಲ ತುಂಬೆಲ್ಲ ಮಲ ಚೆಲ್ಲುವ
ಅಜ್ಜ ನೆಟ್ಟ ಮರಗಳ ಗಾಳಿಯ ಬಯಕೆಗೆ
ಮೆತ್ತಗೆ ಹಿತ್ತಿಲವಾಗಿಲ ತೆರೆದರೆ
ಕರಗಸದಂತೆ ಕೂಗುತಿಹ ಕಾಗೆಗಳ ಸೈನ್ಯ
ತಿಂದ ಸಿಟ್ಟೆಲ್ಲ ಹೊಟ್ಟೆಯಿಂದ ಹೊಡಮರಳಿ
ಎತ್ತಿದರೆ ಕತ್ತಿ ತಲೆ ಸುತ್ತಿ ಬವಳಿ
ತಲೆಯ ಮೇಲೆ ಹೇತ ಕಾಗೆಯ
ಗುರುತೆಲ್ಲಿ ಇಹುದೆನ್ನ ಬಳಿ
-------
ಫ್ರಿಜ್ಜಿನ ಬಾಗಿಲ ತೆಗೆದು
ಮಂಜುಗಟ್ಟಿದ ಬಾಟಲಿ ಎತ್ತಿ
ಜನ್ಮಾಂತರಗಳ ನೀರಡಿಕೆಯ ಕೊಂದುಬಿಟ್ಟೆ.
...ಪ್ರವೀಣ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)