ಶನಿವಾರ, ಆಗಸ್ಟ್ 4, 2012

ಗುಳೆಹೊರಟವರು


ನಡುಹಗಲಲ್ಲೆ ಗುಳೆ ಹೊರಟವರು ನಾವು
ಸಿಕ್ಕ ದಾರಿಗೆ ಹೆಜ್ಜೆಯೊತ್ತಿ
ತಿರುವು ಮುರುವುಗಳಲಿ
ಕಾಲು ಕಳೆದುಕೊಂಡು
ಹರಿವ ತೊರೆ ನೀರ ಕುಡಿದು
ಹೊರಟವರು
ನಡುಹಗಲಲ್ಲೆ ಗುಳೆ ಹೊರಟವರು ನಾವು.

ಅಫ್ಘನ್ನಿಗರಂತೆ ಹುಲ್ಲು
ರೊಟ್ಟಿಯನ್ನಾದರೂ ತಿನ್ನೋಣ
ಎಂದರಸಿದರೆ ಹುಲ್ಲುಕಡ್ಡಿಯೂ ಇಲ್ಲ,
ಉಸುಕಿನಲ್ಲಿ ತಿಂಗಳ
ಹೊಟ್ಟೆ ಹುಗಿದು ಬಂದವರು.

ಮನೆಗೆ ಮಸಣದ ಬೋರ್ಡು ಹಾಕಿ
ಹೆತ್ತೊಡಲ ಕರುಳುಗಳ ಸುಟ್ಟು
ಸುಡದ ಎಲುವಿಗೆ ಬೆಂಕಿ ಹಚ್ಚಿ
ಆರಿದ ಜಗತ್ತಿನ ದೀಪಗಳ
ಬೆಳಗಿಸುವ ಹುಚ್ಚು ಹಚ್ಚಿಕೊಂಡವರು.

ಯಾವ ಬೆಂಕಿಯಿಂದ ತಪ್ಪಿಸಿಕೊಳಬೇಕೆಂದು
ಕರುಳು, ಹೃದಯ, ರಕ್ತನಾಳಗಳ
ಸುಟ್ಟುಕೊಂಡೆವೋ ಅದೇ ಬೆಂಕಿಯ
ಕೆಂಡಗಳ ಮೇಲೆ ಹೆಜ್ಜೆಯೂರಿ
ಹೊರಬಂದವರು.

ಬಗಲಲ್ಲಿ ಕೈಹಿಡಿದೆಬ್ಬಿಸಿ ನಿಲಿಸಿದರು
ಕೊಳಚೆಯಲಿ ಬೀಳದಂತೆ ಕೈಚಾಚಿದರು
ಹೊಟ್ಟೆಗೆ ಹಿಟ್ಟು, ಜುಟ್ಟಿಗೆ ಮಲ್ಲಿಗೆಯ
ಅಭಯಹಸ್ತ ನೀಡಿದರು
ಮನುಷ್ಯ ಇನ್ನೂ ಜೀವಂತನಿಹನೆಂದು
ನಂಬಿದೆವದಕೆ
ನಡುಹಗಲಲ್ಲೆ ಗುಳೆ ಹೊರಟವರು ನಾವು.

2 ಕಾಮೆಂಟ್‌ಗಳು:

Badarinath Palavalli ಹೇಳಿದರು...

ಹಲವು ಭಾವಗಳನ್ನು ಹೊಮ್ಮಿಸುವ ಕವಿತೆ.

ಒಂದೇ ಜಾಡಿಯಲ್ಲಿ ಇಷ್ಟು ವಿವರಗಳು ತುಂಬಿದರೆ ಹೇಗೆ ಗೆಳೆಯ?

ಮಂಜಿನ ಹನಿ ಹೇಳಿದರು...

ಮಾರ್ಮಿಕವಾದ ಅಭಿವ್ಯಕ್ತಿ ಪ್ರವೀಣಣ್ಣ.. ಹಸಿವು ಮತ್ತು ಹತಾಶೆ ಧ್ವನಿ ಎಷ್ಟು ಗಟ್ಟಿಯಾಗಿರುತ್ತದೆ ಎಂಬುದನ್ನು ಬಿಂಬಿಸುತ್ತದೆ ಕವಿತೆ.. ಮೆಚ್ಚಿದೆ..:)