ಶನಿವಾರ, ಸೆಪ್ಟೆಂಬರ್ 15, 2012

ಗದ್ದಲಕ್ಕೆ ನನ್ನ ಛೀಮಾರಿ

ಗದ್ದಲಕ್ಕೆ ನನ್ನ ಛೀಮಾರಿ
ಏಕನಾದದಿ ಹೊರಡುವ ಸೊಳ್ಳೆ ಸಂಗೀತವೂ ಆಹ್ಲಾದಕಾರಿ

ಎಂದು ಸಾಯುವೆನೋ ತಿಳಿಯದು ಎಂದು
ನಾಳೆ ನಾಡಿದ್ದುಗಳ ಚಾಪೆಯ ಮೇಲೆ ಸುರಿದು
ಅಂಚನ್ನು ಎದೆತಂಕ ಎಳೆದು ತಿಂದುಬಿಡುವ ಕಾತರಕೆ
ಹೊಟ್ಟೆಯ ಹಸಿವು ಸಾಕಾಗುವುದಿಲ್ಲ.

ಇದ್ದ ಎಣ್ಣೆಯನ್ನೆಲ್ಲ ಭಾವದೀಪ್ತಿಯಲಿ ಸುರುವಿ
ಬೆಳಕನು ಹೊದ್ದು ಗಡದ್ದು ನಿದ್ದೆ
ಬೆಳಿಗ್ಗೆ ಎದ್ದಾಗ ಸುತ್ತೆಲ್ಲ ಕತ್ತಲು.

ಗದ್ದಲಕ್ಕೆ ನನ್ನ ಛೀಮಾರಿ.

ನಿರ್ದಯ ದೈವದ ಎದುರು ಮುಗಿದ ಕೈಗಳು
ಇರುವೆಗಳು ಕಚ್ಚಿ ಸಕ್ಕರೆ ಪೊಟ್ಟಣ ಖಾಲಿ
ಎದೆಯ ಬೇಗೆ ಶಬ್ದಗಳ ಮುಷ್ಠಿಗೆ ಸಿಗದೇ ಜಾರಿ
ಖಾಲಿ ಪುಟದ ತುಂಬೆಲ್ಲಾ ರಾಡಿ

ಅತಿರಥ ಮಹಾರಥ ಭಗೀರಥ ಪ್ರಯತ್ನ
ಆಕಾಶಕ್ಕೆ ಏರಿದ ಮಣ್ಣಿನ ಪರ್ವತ
ಮೂಲೆಯಲ್ಲಿ ಇರುವೆಗಳ ಮುದ್ದಿನಾಟ
ಕಣ್ಣಿಗೆ ಕಾಣದೆ ವಿಜಯ ದುಂದುಭಿ ಝೇಂಕಾರ

ಗಡಚಿಕ್ಕುವ ಕಾಂಕ್ರೀಟು ಕಾಡುಗಳ ಮಧ್ಯೆ
ತೊನೆದಾಡುವ ಮರಗಳೂ ಚೀರಾಡುತ್ತವೆ
ಸೌಂದರ್ಯ ಧಗಧಗಿಸಿ ಕಣ್ಣ ನೋಯಿಸುತ್ತದೆ
ಕೋಗಿಲೆಯ ಸವಿಗಾನ ಆರ್ತನಾದವೆನಿಸುತ್ತದೆ

ಗದ್ದಲಕ್ಕೆ ನನ್ನ ಛೀಮಾರಿ.

ಸಂಬಂಧಗಳ ನಾತ ನೆತ್ತಿಗೇರಿ
ಪ್ರೇಮಕ್ಕೂ ಕಾಮಕ್ಕೂ ರಾತ್ರಿಯಿಡಿ ಸೆಣಸಾಟ
ಸ್ನೇಹ ಸ್ವಾರ್ಥ ನಂಬಿಕೆಗಳ ತಿಣುಕಾಟ
ಕಣ್ಣೀರಿಗೂ ಖೊಳ್ಳನಗೆಗೂ ಕಣ್ಣುಮುಚ್ಚಾಲೆಯಾಟ
ಹಡ್ಡುವ ಪ್ರತಿ ಖೆಡ್ಡದಲಿ ನಿಧಿಯ ಹುಡುಕಾಟ

ಗದ್ದಲಕ್ಕೆ ನನ್ನ ಛೀಮಾರಿ.

ಶನಿವಾರ, ಸೆಪ್ಟೆಂಬರ್ 8, 2012

ಮಳೆ ಬರಲೇ ಇಲ್ಲ

ನಡುದಾರಿಯಲಿ ಗುಂಡಿ ತೋಡಿ
ಮಳೆಗೆ ಗೊಳೆಯಾಗುವ ನೀರು ನನದೆಂದು
ಕಾದು ಕೂತಿರುವೆ
ಟ್ರಕ್ಕು, ಲಾರಿ, ದೆವ್ವದ ಮೋಟಾರುಗಳ ತಂದು
ನುಣ್ಣನೆ ಸಿಮೆಂಟಿನ ರೋಡು ಹಾಸಿದರು

ಮಳೆ ಬರಲೇ ಇಲ್ಲ

ಹಸಿದ ಹೊಟ್ಟೆಯ ಒಳಗೆ ಬರದು ಶಂಖನಾದ
ತುಂಬಿದ ಹೊಟ್ಟೆಯಲಿ ತಿಂಗಳುಗಟ್ಟಲೆ
ಕಷ್ಟ ನೋವುಗಳ ತರಬೇತಿ ಪಡೆದವರು
ಮಾತ್ರ ಊದಬಹುದು ಕದನಕಹಳೆ

ಮದುವೆಯಾಗದಿರುವುದು ಸರಿಯಾದ ನಿರ್ಧಾರ
ನಾವೆಲ್ಲಾ ನಿರ್ಧಾರ ಮಾಡಲಾಗದವರು
ಕಹಿಯುಪ್ಪು, ಹುಳಿದಾರ ಹೃದಯ ಬಾಣಲೆಯಲಿ ಕುದಿದು
ಪುಪ್ಪುಸಕ್ಕೆ ಬರೀ ಬೆವರಿನ ವಾಸನೆ

ನೆಲದ ನಂಟು ಸಾಕೆಂದು ಸಮುದ್ರಕ್ಕೆ ಧುಮುಕಿದರೆ
ನೀರೆಲ್ಲ ಜೀವಗಾಳಿಯಾಗಿ ಮುಟ್ಟಿದ್ದು ಮತ್ತೊಂದು ನೆಲ
ಕಾವೆಲ್ಲ ಖಾಲಿಯಾಗಿ ಎದೆಯ ನೀಲಿಯಲ್ಲಿ
ಚಂದ್ರನಿಗೆ ಹಸಿವಾಗಿ ನಕ್ಷತ್ರಗಳೆಲ್ಲ ಮಾಯ.

ಮಂಗಳವಾರ, ಸೆಪ್ಟೆಂಬರ್ 4, 2012

ಒಂದೆರಡು ಚುಟುಕು


೧.
ನೀನೋ ಹಾರಾಡುವ ಪತಂಗ
ನಾನು ಬರಿ ಸೂತ್ರ;
ಏರುವೆ ನಿನ್ನೊಡನೆ ಆಗಸದೆತ್ತರ
ಬಿಚ್ಚಿಕೊಂಡರೆ ನಿನ್ನ ಬಂಧ
ನನಗೆ ನೆಲವೊಂದೆ ಹತ್ತಿರ..
೨.
ನೆಲಕೆ ನೆಲೆ ಇಲ್ಲವೋ ಕಂದ
ಅದು ಎಳೆದತ್ತ ಅಲೆದಾಡುವ ಚಂಡ
ಆಗಸಕೆ ಅರ್ಥವಿಲ್ಲವೋ ತಮ್ಮ
ಅದು ಕೊನೆಯಿಲ್ಲದ ಭಂಡ..