ಬುಧವಾರ, ಆಗಸ್ಟ್ 15, 2012

ಯಾರ ಸ್ವಾತಂತ್ರ್ಯಸ್ವಾತಂತ್ರ್ಯೋತ್ಸವದ ಹೊಸ್ತಿಲಲ್ಲಿ ವಿಚಿತ್ರವಾದ ತಳಮಳ ಮನಸ್ಸನ್ನು ಆವರಿಸಿದೆ.  ಇಡೀ ಭಾರತದ ಇಂದಿನ ಪರಿಸ್ಥಿತಿಯನ್ನು ಒಂದು ಬಾರಿ ನೋಡಿದಾಗ ನಾವೆಲ್ಲಿ ಸಾಗಿದ್ದೇವೆ ಎಂಬುದು ತಿಳಿಯದೇ ಕಂಗಾಲಾಗುತ್ತದೆ ಮನಸು.  ರಿಮೋಟ್ ಕಂಟ್ರೋಲಿನಂತೆ ಮಾತನಾಡದೇ ಯಾರದೋ ಬಯಕೆಯನ್ನು ಈಡೇರಿಸುತ್ತ, ತಾನು ಅದಕ್ಕೆಲ್ಲ ಹೊಣೆಯೇ ಅಲ್ಲ ಎಂಬಂತೆ ಆಳ್ವಿಕೆ ನಡೆಸುತ್ತಿರುವ ನಮ್ಮ ದೇಶದ ಪ್ರಧಾನಮಂತ್ರಿ ಒಂದೆಡೆಯಾದರೆ, ರಾಜ್ಯದಲ್ಲಿ ಯಾರದೋ ಪಗಡೆಯಾಟದ ದಾಳವಾಗಿ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ.  ಅರಾಜಕತೆ ಎನ್ನುವುದೇ ಅರ್ಥ ಕಳೆದುಕೊಂಡಿದೆ.
ಕುತಂತ್ರಿಗಳು, ರೌಡಿಗಳು, ಮೂಲಭೂತವಾದಿಗಳು, ಹುಚ್ಚರು ಈ ದೇಶವನ್ನು ತಮಗೆ ಬೇಕಾದ ಹಾಗೆ ನಡೆಸುತ್ತಿದ್ದಾರೆ ಎನಿಸುತ್ತದೆ.  ಎಲ್ಲರಿಗೂ ಬರೀ ಹಣದ ವ್ಯಾಮೋಹವೇ ಹೆಚ್ಚಿದಂತೆ ಎನಿಸುತ್ತದೆ.  ಯಾರಿಗೂ ತಮ್ಮ ಹೆಸರನ್ನು ಉಳಿಸಿಕೊಳ್ಳುವ, ದೇಶದ ಸಾಮಾನ್ಯ ಜನರ ಬದುಕಿನ ಬಗೆಗೆ ಚಿಂತೆಯೇ ಇಲ್ಲ ಎನಿಸುತ್ತದೆ.  ಹೆಸರು ಕೆಡಿಸಿಕೊಂಡಾದರೂ ಸರಿ ಹಣ ಗಳಿಸಿಕೊಳ್ಳುವ ಎಲ್ಲ ಒಳದಾರಿಗಳ ಉಪಯೋಗಿಸುವ ಇಂದಿನ ನಾಯಕರ ಮನಃಸ್ಥಿತಿಯನ್ನು ಕಂಡು ಇಂದು ನಮ್ಮನ್ನು ಸರಿಯಾದ ದಾರಿಗೆ ಕೊಂಡುಕೊಂಡು ಹೋಗುವವರು ಯಾರೂ ಇರುವುದರ ಚಿಹ್ನೆಯೇ ಕಾಣುತ್ತಿಲ್ಲ.
ಯಾರಿಗೂ ನಮ್ಮ ದೇಶದ ಮುಂದಿರುವ ಸವಾಲುಗಳು ಕಾಣುತ್ತಲೇ ಇಲ್ಲ.  ಒಂದೆಡೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಜನಗಳಲ್ಲಿ ಹಣ ಗಳಿಸುವ ಅವಸರವಾದರೆ, ಇನ್ನೊಂದೆಡೆ ಜಾತಿ ಮತಗಳ ಹೆಸರಿನಲ್ಲಿ ಮನುಷ್ಯತ್ವವನ್ನು ಕೊಲ್ಲುವ ಸನ್ನಾಹಗಳು, ಮಗದೊಂದೆಡೆ ಇಂಥ ಸಂದರ್ಭದಲ್ಲೂ ಕೊರಳೆತ್ತಲು ಸಾಧ್ಯವಾಗದ ಜನಸಾಮಾನ್ಯರ ಅನಿವಾರ್ಯಗಳು.  ಇವತ್ತು ಮತ್ತೆ ಎಲ್ಲರೂ ಶಾಲೆ, ಕಾಲೇಜು, ತಮ್ಮ ದಿನನಿತ್ಯದ ನೌಕರಿ, ವ್ಯಾಪಾರಗಳ ಬಿಟ್ಟು ಬೀದಿಗಿಳಿದು ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮ ಮಾಡಬೇಕಾಗಿದೆಯೇ ಎಂಬ ಪ್ರಶ್ನೆ ತಲೆದೋರುತ್ತಿದೆ.  ನಮ್ಮನ್ನು ಆಳುವವರಿಗೆ ನಾಚಿಕೆ, ತಮ್ಮ ಜವಾಬ್ದಾರಿಗಳ ಅರಿವು, ತಮ್ಮನ್ನು ಆರಿಸಿತಂದ, ಕುರ್ಚಿಯ ಮೇಲೆ ಕುಳ್ಳಿರಿಸಿದ ಜನಗಳ ಬಗೆಗೆ ಕರ್ತವ್ಯ ನಿಷ್ಠತೆ ಇಲ್ಲವೇ ಎಂದು ನಿರಾಶೆಯಾಗುತ್ತದೆ.
ಒಂದು ದಿನ ಹುಟ್ಟುಹಬ್ಬ ಆಚರಿಸುತ್ತಿರುವ ಯುವಕರ ಮೇಲೆ ಯಾರು ಬೇಕಾದರೂ ಬಂದು ಎಳೆದಾಡಿ ಹೊಡೆದು ವಿಡಿಯೋ ತೆಗೆದು ಸುದ್ದಿವಾಹಿನಿಗಳಲ್ಲಿ ಬಿತ್ತರಿಸಿದರೂ ಕೇಳುವವರಿಲ್ಲ ಎಂಬ ಸುದ್ದಿ ಬಂದರೆ, ಮತ್ತೊಂದು ದಿನ ದೊಣ್ಣೆ, ಮಚ್ಚು, ಸರಳುಗಳ ತೆಗೆದುಕೊಂಡು ಹೊರಟ ಗುಂಪೊಂದು ಆರಾಮಾಗಿ ಲೋಕಲ ರೈಲು ಹತ್ತಿ ಇನ್ನೊಂದು ನಿಲ್ದಾಣದಲ್ಲಿ ಇಳಿದು ಅಲ್ಲಿ ಜನರನ್ನು, ಪತ್ರಕರ್ತರನ್ನು, ಪೋಲೀಸರನ್ನು ಥಳಿಸಲು ಕೂಡ ಧೈರ್ಯ ಮಾಡಬಹುದು ಎಂಬ ವಾರ್ತೆ. ಇನ್ನೊಂದು ದಿನ, ಎರಡು ವರ್ಷದ ಹಿಂದೆ ತಾವು ಪ್ರೀತಿಸಿದವರನ್ನು ಮದುವೆ ಮಾಡಿಕೊಂಡು, ದುಡಿದು, ತಮ್ಮ ಏಳು ವರ್ಷದ ಮಗಳ ಜೊತೆಗೆ ಸುಖವಾಗಿ ಬಾಳುತ್ತಿದ್ದವರನ್ನು ಜಾತಿ ಬಿಟ್ಟು ಮದುವೆಯಾದ ಕಾರಣಕ್ಕೆ ನಡುರಾತ್ರಿ ಕಡಿದು ಸುಟ್ಟುಹಾಕಲು ಸಹ ಹೇಸಬೇಕಾದ ಅಗತ್ಯವಿಲ್ಲ ಎಂದು ತಿಳಿದುಕೊಳ್ಳುವ ಮನುಷ್ಯತ್ವ ಮರೆತ ಬಂಧುಗಳು.  ಇಂಥ ಸುದ್ದಿಗಳನ್ನೆಲ್ಲ ದಿನವೂ ನೋಡುತ್ತ ತಮ್ಮ ಬದುಕಿನ ಪ್ರತಿಕ್ಷಣವನ್ನು ಭಯದಲ್ಲೇ ಕಳೆಯಬೇಕಾದ ಅನಿವಾರ್ಯತೆ ಈ ಬೃಹತ್ ದೇಶದ ನೂರಿಪ್ಪತ್ತು ಕೋಟಿ ಜನತೆಗೆ.
ಸಂವಿಧಾನ, ಸರಕಾರ ಮಾಡಿರುವ ಕಾನೂನುಗಳನ್ನು ಯಾರಾದರೂ ಸುಲಭವಾಗಿ ಮುರಿದು ಐಷಾರಾಮವಾಗಿ ಅಲೆದಾಡಬಹುದು ಆದರೆ ರೌಡಿಗಳ, ಧರ್ಮರಕ್ಷಣೆಯ ಮುಖವಾಡದವರ, ಉಗ್ರವಾದಿಗಳ ಕಾನೂನುಗಳನ್ನು ಯಾರೂ ಮುರಿಯುವಂತಿಲ್ಲ.  ಇವರಿಗೆ ಸರಕಾರದ ಕಾನೂನು ಏನೂ ಮಾಡಲಾಗದು. ಇದೆಲ್ಲ ತಮಗೆ ಸಂಬಂಧವೇ ಇಲ್ಲವೆಂಬಂತೆ ಅಮಾಯಕ ಜನರನ್ನು ದೋಚಿ ತಮ್ಮ ಖಜಾನೆ ತುಂಬಿಸಿಕೊಳ್ಳುವ ಕಾಯಕದಲ್ಲಿ ತಲ್ಲೀನರಾಗಿರುವ ನಮ್ಮ ಧುರೀಣರು.  ಪತ್ರಿಕೆಗಳಲ್ಲಿ, ಸುದ್ದಿವಾಹಿನಿಗಳಲ್ಲಿ ಸಂದರ್ಶನ, ವಾಗ್ವಾದ ಮಾಡುತ್ತ ಕಾಲ ಕಳೆಯುತ್ತಿರುವ ಬುಧ್ಧಿಜೀವಿಗಳು, ಸಮಾಜ ಸುಧಾರಕರು.
ಒಂದು ಬಾರಿ ಆರಿಸಿ ಕಳಿಸಿದರೆ ಐದು ವರ್ಷಗಳವರೆಗೆ ಏನೂ ಮಾಡಲಾಗದೇ ಸರಕಾರವನ್ನು ಬೈಯ್ಯುತ್ತ ಕೈಹಿಸುಕಿಕೊಳ್ಳುತ್ತ ಕುಳಿತುಕೊಳ್ಳುವುದನ್ನು ಬಿಟ್ಟರೆ ಬೇರೆ ದಾರಿ ಕಾಣದ ಜನಸಾಮಾನ್ಯರು ಅದನ್ನು ತಮ್ಮ ದೈವವೆಂದುಕೊಳ್ಳದೇ ಬೇರೆ ದಾರಿಯೇ ಇಲ್ಲದಿರುವುದು ನಮ್ಮ ಪ್ರಜಾಪ್ರಭುತ್ವದ ದೊಡ್ಡ ಸೋಲು.  ಹೋಗಲಿ ಐದು ವರ್ಷಗಳಾದ ಮೇಲೆ ಒಳ್ಳೆಯವರನ್ನು ಆರಿಸಿ ಕಳಿಸಬೇಕೆಂದು ದೃಢನಿರ್ಧಾರ ಮಾಡಿದರೂ ಒಳ್ಳೆಯವರೆಲ್ಲಿ ಎಂದು ಹುಡುಕಬೇಕಾದ ದುರದೃಷ್ಟ.  ಮತ್ತೇನು ಮಾಡಬೇಕು.  ತಮ್ಮವರಿಂದಲೇ ತಮ್ಮ ದೇಶವನ್ನು ಕಾಪಾಡಲು ಮತ್ತೆ ಈ ಭಾರತದ ಪ್ರಜೆ ಸಂಗ್ರಾಮಕ್ಕೆ ಇಳಿಯಬೇಕೇ? ಯಾರೊಡನೆ ಹೋರಾಡಬೇಕು? ದಾರಿ ತೋರುವವರು ಯಾರು? ಇಡೀ ದೇಶಕ್ಕೆ ಮಂಕು ಕವಿದಿದೆ.
65 ವರ್ಷಗಳ ಹಿಂದಿದ್ದ ಸವಾಲುಗಳು ಇಂದಿಗೂ ಹಾಗೇ ಇವೆ.  ಎಷ್ಟು ಸುತ್ತುಹಾಕಿದರೂ ಮತ್ತೆ ಅದೇ ಸ್ಥಳಕ್ಕೆ ಬಂದು ನಿಲ್ಲುವ ವಿಷವರ್ತುಲದಲ್ಲಿ ಸಿಲುಕಿಕೊಂಡಿದ್ದೇವೆ.  ಅದೇ ಬಡತನ, ನಿರುದ್ಯೋಗ, ಉಗ್ರಗಾಮಿಗಳ ಕಾಟ, ಧರ್ಮಗಳ ಸೆಣಸಾಟ, ನಿರಕ್ಷರತೆ, ಅನಾರೋಗ್ಯ, ಬೆಲೆ ಏರಿಕೆ, ಅರಾಜಕತೆ ಅವೇ ಸಂದಿಗ್ಧಗಳು ಇಂದಿಗೂ ಕಾಡುತ್ತಿವೆ.  ಬದಲಿಗೆ ಇವೆಲ್ಲದರ ಜೊತೆಗೆ ಇನ್ನೂ ಕೆಲವು ತೊಂದರೆಗಳು ಹೊಸದಾಗಿ ಹುಟ್ಟಿಕೊಂಡಿವೆ.  ಅವುಗಳನ್ನು ಬಗೆಹರಿಸುವ ದಾರಿಗಳ ಬರ ಕಂಡುಬರುತ್ತಿದೆ.  ಇನ್ನೂ ನಮ್ಮ ರೈತ ಮಳೆಯ ದಾರಿ ಕಾಯುತ್ತ ಗಗನದತ್ತ ನೋಡುತ್ತ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವ ಚಿತ್ರ ಕಣ್ಣಿಗೆ ಕಟ್ಟುತ್ತಿದೆ.  ಬೆವರು ಸುರಿಸಿ ಹಗಲೆಲ್ಲ ದುಡಿದು ರಾತ್ರಿಯ ಊಟಕ್ಕೆ ಇಲ್ಲದೇ ಗಂಜಿ ಕುಡಿಯುವವರ ಸಂಖ್ಯೆ ಏರುತ್ತಲೇ ಇದೆ.
ಇಡೀ ವಾತಾವರಣ ನಿರಾಶಾದಾಯಕವಾಗಿದೆ.  ಎಲ್ಲೆಲ್ಲೂ ಕೈಲಾಗದ ಹೇಡಿತನ ಕಣ್ಣಿಗೆ ರಾಚುತ್ತದೆ.  ನಮ್ಮ ದೇಶ ಎಷ್ಟೆಲ್ಲ ಕ್ಷೇತ್ರಗಳಲ್ಲಿ ಮುಂದುವರೆದಿದೆ ಎಂದು ಎಷ್ಟು ಟಾಂಟಾಂ ಬಾರಿಸಿದರೂ ಇನ್ನೂ ಕೆಳಸ್ತರದವರಿಗೆ ಸ್ವಾತಂತ್ರ್ಯದ ಫಲಗಳು ಮಾತ್ರ ದೊರೆಯುತ್ತಿಲ್ಲ.  ಮಧ್ಯಮವರ್ಗದವರು ಹೆದರಿಕೆಯಲ್ಲಿ ಬಾಳುವಂತಿದೆ.  “ಎಲ್ಲಿಗೆ ಬಂತು, ಯಾರಿಗೆ ಬಂತು, ನಲವತ್ತೇಳರ ಸ್ವಾತಂತ್ರ್ಯ?” ಎಂಬ ಪ್ರಶ್ನೆ ಇಂದಿಗೂ ಪ್ರಸ್ತುತವೆನಿಸುವುದು ಎಂಥ ವಿಪರ್ಯಾಸ.

1 ಕಾಮೆಂಟ್‌:

Badarinath Palavalli ಹೇಳಿದರು...

ಕಾಲ ಕಾಲಕ್ಕೆ ದೇಶವನ್ನಾಳಿದ ಕೆಟ್ಟ ರಾಜಕಾರಣಿಗಳು ಸ್ವಾರ್ಥಿಗಳಾಗಿದ್ದರು. ನಮ್ಮ ಸೋಲಿಗೆ ಅವರ ದಾರ್ಶನಿಕತೆಯ ಕೊರತೆ ಮತ್ತು ಬಹು ಪಕ್ಷೀಯ ಚುನಾವಣೆ ವ್ಯವಸ್ಥೆ ಕಾರಣವಾಯಿತು.