ಶುಕ್ರವಾರ, ಮೇ 18, 2012

ಸಾಯುವ ದಿನ

ಸಾವು ಸಂಪದ್ಭರಿತವಾಗಿರಬೇಕು
ದುಗುಡದಲೇ ಕೈಹಿಡಿದು ಕುಳಿತವಳ
ಕಂಗಳಲಿ ಕಾಣಬೇಕೆನಗೆ ಸಂತೃಪ್ತಿ.

ಪ್ರಕೃತಿ ಮಡಿಲಿನ ಸೂರಿನ ಎದುರು
ಬೆಳೆದು ನಿಂತ ಪಚ್ಚೆ ಪೈರಿನ ಮಧ್ಯೆ
ಹೊಂಬಣ್ಣದ ಸೂರ್ಯನ ರಶ್ಮಿಕಿರಣ
ಮಂಜಿನ ಹನಿಗಳಲಿ ಚಿತ್ರಿಸಬೇಕು ಕಾಮನಬಿಲ್ಲು.

ಭಾವಸ್ಫುರಣದಿಂದ ಬಗೆತೆಗೆದ
ಕಾವ್ಯಸಂಕುಲವೆಲ್ಲ ಹಾಡಾಗಿ
ಕೋಗಿಲೆಯ ತುಟಿಗಳಲಿ ನಲಿದಾಡಬೇಕು.

ಮಾನವ ನವನಾಗಿ ಮಾನವಂತನಾಗಿ
ಮನದ ಒಳಗಣ ಭಾವಕೆ ತಲೆದೂಗಬೇಕು.

ರಾತ್ರಿಯ ಮರೆಯಲ್ಲ್ಲಿ ಕುಣಿಯುವ ಕ್ರೌರ್ಯ
ಸುಟ್ಟುಹೋಗಲಿ ಅರುಣನಗ್ನಿಸ್ಪರ್ಶಕೆ
ಬೆಳಗಿಗೂ ಬೈಗಿಗೂ ಇರಲಿ ಒಂದೇ ಅಂತರ
ರವಿಯಿಂದ ಕಡ ತಂದು ಬೆಳಗಲಿ ಚಂದಿರ.

ಎಳೆಕಂದಮ್ಮಗಳ ಜನ್ಮವಿತ್ತ ತಾಯ
ಮೊಲೆವಾಲುಂಡ ಹಾಲ್ದುಟಿಯಲಿ ಸೂಸಿದ
ಮಂದಹಾಸದಲಿ ಕರಗಿ ಹೋಗಲಿ ನೋವು.

ನೋಡಬೇಕೆಂದೆನ್ನ ದೂರದಿಂದ ಬಂದವರ
ಕಾಡಕೂಡದು ಹೊಗೆ, ಧೂಳು, ದಟ್ಟಣೆ.

ಕಾಡಕೂಡದು  ಸಾವು ಹಾದಾಡುವ ಹಾದಿಯಲಿ
ಚಾಕು ಚೂರಿ ಬಂದೂಕಿನ ಗುಂಡಿನಲಿ
ನಂಬಿಕೆಗೆ ಉರಿಹತ್ತಿ ನೆರೆಯವರ ಹಗೆಗಳಲಿ
ನೆಲದ ಹಂಚಿಕೆಗಾಗಿ ರಕ್ತ ಹಂಚಿಕೊಂಡವರಲಿ
ಕುರುಡು ಕಾಂಚಾಣದ ಮತಿಭ್ರಮಿತ ಆಶೆಯಲಿ
ಮೂರು ನಿಮಿಷದ ಸುಖದ ವ್ಯಗ್ರ ವ್ಯಾಮೋಹದಲಿ.

ತುತ್ತು ಕೂಳಿಗಾಗಿ ಕಳೆಯಕೂಡದು ಮಮತೆ
ತುಳಿಯಕೂಡದು ವಾಮನ ತೊಳೆಯಿಲ್ಲದ ಮನೆಯ.

ಹುಟ್ಟು ಕಟ್ಟದಿರಲಿ ಪ್ರತಿಭೆಗೆ ಚಟ್ಟ
ನರ್ತಿಸುವ ನವಿಲು ಹಾಡುವ ಕೋಗಿಲೆ
ತಮ್ಮ ಚರಿತ್ರೆಯ ಹೇಸುವ ದಾರಿದ್ರ್ಯ ಬರದಿರಲಿ.

ಒಲವು ಹರಡಲಿ ಪ್ರತಿ ಮೊಳಕೆಯಲಿ
ಸಂತಸ ಮೊಳಗಲಿ ಮಾತು ಮಾತುಗಳಲಿ
ರಟ್ಟೆ ಸಿಗಲಿ ಕಣ್ಣಿಲ್ಲದ ಪ್ರತಿ ಜೀವಕೆ
ಹೊಟ್ಟೆ ತುಂಬಿ ಜೀವನ ಉಳಿಯಲಿ ಬಾಳಿಗೆ..

                                   ....ಪ್ರೀತೀಶ.

1 ಕಾಮೆಂಟ್‌:

ಮಂಜಿನ ಹನಿ ಹೇಳಿದರು...

ನನ್ನಲ್ಲಿ ಪದಗಳೇ ಉಳಿದಿಲ್ಲ ಪ್ರವೀಣಣ್ಣ.. ನಾನು ಕಂಡ ಅದ್ಭುತ ಕವಿತೆಗಳಲ್ಲೊಂದು ಇದು.. ಬಹುಶಃ ಈ ವಿಷಯ ನನ್ನನ್ನು ಬಹುವಾಗಿ ಕಾಡುವ ಕಾರಣದಿಂದ ಈ ಕವಿತೆ ಅಷ್ಟು ಇಷ್ಟವಾಯ್ತೋ ಏನೋ.. ಮನದಾಳಕ್ಕಿಳಿದ ಕವಿತೆ.. ಮೊದಲಿಂದ ಕಡೆಯ ಹೊರಗೆ ಅಚ್ಚುಕಟ್ಟಾಗಿ ಓದಿಸಿಕೊಂಡಿದೆ.. ಸಾವಿನಲ್ಲೂ ನಗುವನ್ನು, ನಗುವಲ್ಲೂ ಸಾರ್ಥಕತೆಯನ್ನು ಕಾಣುವ ಕವಿಮನದ ಕಲ್ಪನೆಗಳು ಅತ್ಯದ್ಭುತ ಎನಿಸಿತು..
ಸಾವು ಸಂಪದ್ಭರಿತವಾಗಿರಬೇಕು
ದುಗುಡದಲೇ ಕೈಹಿಡಿದು ಕುಳಿತವಳ
ಕಂಗಳಲಿ ಕಾಣಬೇಕೆನಗೆ ಸಂತೃಪ್ತಿ.
ಈ ಸಾಲುಗಳನ್ನು ನಾನು ಮರೆಯಲು ಸಾಧ್ಯವೇ ಇಲ್ಲವೇನೋ ಎನಿಸುವಷ್ಟರಮಟ್ಟಿಗೆ ಅದು ನನ್ನನ್ನು ಆವರಿಸಿದೆ.. ಅದ್ಭುತವಾದ ಕವಿತ್ವ..:)