ಗೆಳೆಯ ಹೇಮಂತ ಕುಮಾರ ಅವರ ಅನಿಸಿಕೆ..
ಸಂಕಲ್ಪ
ಒಂದು ದಾರ ಕೈಯಿಗೆ ಕಟ್ಟಿ ಹೆಂಡತಿಯನ್ನ ತಂಗಿ ಮಾಡಬಹುದಾದರೆ? ಕೊರಳಿಗೂ ಒಂದು ದಾರವನ್ನೇ ಕಟ್ಟಿ ತಂಗಿಯನ್ನು ಹೆಂಡತಿ ಮಾಡಲಾಗುವುದಿಲ್ಲವೆ? ಎಂದರೆ ನೀವೇನು ಹೇಳ್ತೀರಿ? ಇಂತಹ ಹತ್ತು ಹಲವು ಪ್ರಶ್ನೆಗಳನ್ನು ನಮಗೇ ನೇರವಾಗಿ ಕೇಳುತ್ತಾ ಸಾಗುತ್ತದೆ ಸಂಕಲ್ಪ. ಒಂದು ಸಾಹಸ ಯಾತ್ರೆಯಲ್ಲಿ ಮುಳುಗೆದ್ದು ಬರುವ ಧೈರ್ಯ ಮಾಡುವ ಹಾಗಿದ್ದರೆ ಕೊಂಡು ಓದಿ. ‘ನಮ್ಮ’ ಮತ್ತು ‘ತಮ್ಮ’ ನಡುವಿನ ಇಬ್ಬರು ಸಾಧಾರಣ ಕೇವಲ ಮನುಷ್ಯರ ಗೋಳಾಟ, ಪರದಾಟ, ಸೆಣಸಾಟ, ಗುದ್ದಾಟ, ಕನಸುಗಳ ಕೊಸರಾಟ, ಮನಸುಗಳ ಮುದ್ದಾಟ, ಉತ್ತರಿಸುವವರಿರದ ಪ್ರಶ್ನೆಗಳೆರಚಾಟ, ಒಂದು ಲಕ್ಷ್ಯದೆಡೆಗಿನ ನಿರಂತರ ಓಟ. ಸ್ವಾರಸ್ಯಕರವಾಗಿ ಹೇಳಿ ಮನರಂಜಿಸಬೇಕೆಂದು ಕೊಂಚವೂ ಪ್ರಯತ್ನಿಸಲಾಗಿಲ್ಲ ಇಲ್ಲಿ. ನೈಜ ಘಟನೆಗಳ ನೇರಾನೇರ ವಿವರಣೆಯಂತಿದ್ದರೂ ಕುತೂಹಲವನ್ನು ಕೆರಳಿಸಿದರೆ ಅದಕ್ಕೆ ಕಾದಂಬರಿ ಜವಾಬ್ದಾರಿಯಲ್ಲ. ಪುಸ್ತಕ ಕೊಂಡು ಮೊದಲ ಅಧ್ಯಾಯ ಓದುವ ದುಸ್ಸಾಹಸ ನಾವು ಮಾಡಿದರೆ ಸಾಕು ಜಾರೋ ಬಂಡೆಯಲ್ಲಿ ಕೊನೆಮುಟ್ಟುವ ತನಕ ಕಾದಂಬರಿಯೇ ಜಾರಿಸಿಕೊಂಡು ಹೋಗುತ್ತದೆ.
ಪ್ರಿಯ ಪ್ರೀತೀಶ ಅವರೇ,
ಕೊನೆಯ ಪುಟವನ್ನು ಮಗುಚಿಹಾಕುವಷ್ಟರಲ್ಲಿ ಒಂದು ಒಳ್ಳೆಯ ಅನುಭವ ಹೊತ್ತು, ನನ್ನ ಹಳೆಯ ದಿನಗಳ ನೆನಪುಗಳ ಮೂಟೆಯನ್ನು ಹಿಡಿದು ನಿಮ್ಮನ್ನು ನೋಡುತ್ತಾ ನಿಂತಿದ್ದೆ. ನೈಜವಾಗಿ ಇರುವುದು ಇರುವ ಹಾಗೆ ಮೂಡಿಬಂದಿದೆ, ಅದು ಇಷ್ಟವಾಯ್ತು. ಅಬ್ದುಲ್ಲಾ ನಮನ್ ನನ್ನು ಮೊದಲಾರ್ಧದಲ್ಲಿ ಕರೆತಂದು ಊರು ಬಿಟ್ಟು ಹೋಗಲು ಧಮಕಿ ಹಾಕುವ ಸನ್ನಿವೇಶವನ್ನು ಅಮ್ಮನ ದೃಷ್ಟಿಕೋನದಲ್ಲಿ, ಸ್ನೇಹಿತನ ದೃಷ್ಟಿಕೋನದಲ್ಲಿ, ನಮನನ ದೃಷ್ಟಿಕೋನದಲ್ಲಿ ಹೇಳಿ ಮತ್ತೆ ಅದೇ ಘಟನೆಗೆ ತಂದು ನಿಲ್ಲಿಸುವ ಟೆಕ್ನಿಕ್ ಬಹಳ ಹಿಡಿಸಿತು. ಅದು ಬಿಟ್ಟರೆ ಕಥೆ, ನಿರೂಪಣೆ ಮುಗ್ಧ ಪ್ರೇಮಿಗಳಿಬ್ಬರ ಜೀವನದ ಒಂದು ಎಪಿಸೋಡಿನ ರಿಪೋರ್ಟಿನ ರೀತಿ ಸಾಗುತ್ತಾ ಹೋದ ಹಾಗೂ ಏನಾಗಬಹುದೆಂದು ಗೊತ್ತಿದ್ದರೂ ಹೇಗೆ ಆಗುವುದೆಂಬ ಕೆಟ್ಟ ಕುತೂಹಲ ಹಿಡಿದಿಟ್ಟು ಓದಿಸುತ್ತದೆ. ಇಷ್ಟೆಲ್ಲಾ ಸಾಹಸವನ್ನು ಮಾಡಿ ಗೆದ್ದರಲ್ಲಾ ಎಂದು ಖುಷಿ ಪಡಬೇಕೋ ಅಥವಾ ಈ ರೀತಿ ಇನ್ನೂ ಬದುಕುವ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವಂತಹ ನಂಬಿಕೆಗಳಿಗಾಗಿ ಬೇಸರ ಪಡಬೇಕೋ ಗೊತ್ತಿಲ್ಲ. ಒಟ್ಟಿನಲ್ಲಿ ಆದಷ್ಟೂ ಪ್ರೇಮಿಗಳು ಗೆದ್ದು ಚೆನ್ನಾಗಿ ಜೀವನ ನಡೆಸುವಂತಾಗಲಿ ಎಂದು ಆಶಿಸುತ್ತೇನೆ ನಮನ ಮತ್ತು ತಮನ್ನಾ ಮರುಪ್ರತಿಗೊಂಡಷ್ಟೂ ನಮನ ಮತ್ತು ತಮನ್ನರನ್ನು ಹುಟ್ಟುಹಾಕುವಂತಾಗಲಿ… ಮುಂದೂ ಹಿಸ್ಲಿಂ ಜಾತಿಗಳು ಕೂಡ ಹುಟ್ಟುತ್ತಾ ಹೋಗಲಿ. Enjoyed a lot as a reader.. Experienced a lot as a student. Thanks for the wonderful novel.. keep writing.. ಸಾಗಲಿ ನಿಮ್ಮ ಸಾಹಿತ್ಯ ಯಾತ್ರೆ.. ವಿಭಿನ್ನ ವಿಷಯಗಳ ಬಗ್ಗೆ ಹೆಚ್ಚು ಹೆಚ್ಚು ಬರೆಯುವಂತಾಗಲಿ... ನಿಮ್ಮ ಚೊಚ್ಚಲ ಕಾದಂಬರಿಯ ಯಶಸ್ಸಿಗೆ ವಂದನೆಗಳು ಪ್ರವೀಣ ಕುಲಕರ್ಣಿ :-)
ಇಂತಿ ನಿಮ್ಮ ಗೆಳೆಯ,
ಹೇಮಂತ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ