ಸೂರ್ಯನದೇ ದಬ್ಬಾಳಿಕೆ
ಇನಿಯನಾಸರೆಯಿಲ್ಲದೆ ಬೇಸರಿಸಿ
ಪಚ್ಚೆ ಪೈರಿನ ಜಾಗದಲಿ
ಮುರುಟಿ ಹೋದ, ತೇಪೆ ಮೆತ್ತಿದ
ಹರಿದು ಹದಿನಾರಾದ ಸೀರೆ,
ಮನವೆಲ್ಲಾ ಮರುಗಿ, ಮೈಯೆಲ್ಲಾ ಸೊರಗಿ
ಚಕಚಕನೆ ಹೊಳೆವ ಚರ್ಮದ
ತುಂಬಾ ಲಕ್ಷಾಂತರ ಬಿರುಕುಗಳು.
ಕಾದಿಹಳು ಕಾಲನಕಾಲ ಮೃತ್ಯುವಿನವರೆಗೂ
ನೊಂದಿಹಳು ಮಕ್ಕಳ ಹೊಟ್ಟೆಗೂ ಇಲ್ಲದೆ
ಪ್ರಿಯನಿಲ್ಲದೆ ಪರಪೀಡೆಯನನುಭವಿಸುತ
ಕಣ್ಣೀರು ತುಂಬಿ ಹರಿದಿಹುದು ಇಳೆತುಂಬಾ.
ನಂಬುಗೆಯುಂಟು ಬಂದೇ ಬಹನವನು
ಸೂರ್ಯನ ಶಾಖ ಸಂಕುಲದಿಂದೆನ್ನ
ಬಿಡಿಸಿ, ಒಲವಿನ ಮಳೆಗರೆದು
ಮನತುಂಬಾ ಹೂಮಾಲೆಯಾಗುವನು.
ಸೂರ್ಯನಿಗೆ ಸೋತು, ಭುವನವ ತೊರೆದು;
ಸೈನ್ಯ ಒಗ್ಗೂಡಿಸಿ, ಇಡಿ ಇಡಿಯಾಗಿ
ಪಡಿಮೂಡಿ ಬಾನಿನಲಿ ಸೂರ್ಯನ
ಹುಟ್ಟಡಗಿಸಲು ಧೈರ್ಯದೆ ಬಂದಿಹನು ಮೇಘ.
ಕಲೆಯಿಂದ, ಮನದ ಬಲದಿಂದ
ಸೆಣಸಾಡಿ, ಭುವಿಯತ್ತ ಚಾಚಿದ
ಕೈಗಳ ಕಚಕಚನೆ ಕತ್ತರಿಸಿ
ಗೆದ್ದಾನು ಮೇಘ ಸೂರ್ಯನ ಬಂಧಿಸಿ.
ಕಲಕಲನೆ ನಕ್ಕಾಳು ಭೂಮಿ
ತನ್ನಿನಿಯನ ಮೊಗವನ್ನು ನೀವಿ
ಕರೆದಾಳು ಹೃದಯಮಂಟಪಕೆ...
ಮೂರು ವರುಷದ ವಿರಹ
ತಡೆಯಲಾಗದೆ ಬೇಗೆ
ಸಿಡಿಲಗೈಯಿಂದ ಚಿವುಟಿಹನು ತೊಡೆಯ
ಒಡನೆ ನೋವಿಗೆ ಗುಡುಗಿ
ಮುಲುಗಿಹಳು ಪೊಡವಿ
ತಪ್ಪಿಗೆ ಕಪ್ಪಿಟ್ಟು ಮೆಲ್ಲ ಕಚಗುಳಿಯಿಟ್ಟು
ರಮಿಸಿದನು ಸುಂದರಿಯ ಸಿಟ್ಟು
ನಾಚಿ ನೀರಾಗಿ ನಿಡುಸುಯ್ದು ಎಲ್ಲೆಲ್ಲೂ
ಮಣ್ಣ ಕಂಪನು ಸೂಸಿಹಳು ಧರಿಣಿ.
ಸಕಲ ಚರಾಚರಗಳೆಲ್ಲ
ಕೈಬೀಸಿ ಕರೆದಾವು,
ಬಾರಯ್ಯ ತಂದೆ
ಪ್ರೀತಿಯ ಮಳೆಗರೆಯೆ.
ಭಾವುಕ ಮೇಘ ಮೆತ್ತಗೆ
ಮುದ್ದಿಟ್ಟು ಮೈದಡವಿ
ಸಳಸಳನೆ ಸುಳಿದಿಹನು.
ಚುಂಬನ, ಆಲಿಂಗನ, ಬಾಹುಬಂಧನ.
ಅವನಿಯ ಮೈಮನಗಳೆಲ್ಲ ಅರಳಿ
ಬತ್ತಿದ ಮೊಲೆಗಳಲಿ ಹಾಲು ತುಳುಕಿ
ಹರಿದ ನದಿಗುಂಟ ಜೀವಸಂಕುಲವೆಲ್ಲ
ಮನದಣಿಯೇ ಕುಡಿದು ಕುಪ್ಪಳಿಸಿ
ಉಲಿದಾವೋ ಹಕ್ಕಿ
ನಲಿದಾವೋ ನವಿಲು
ಖಗ ಮೃಗಗಳೆಲ್ಲ
ಬಾನಂಗಳಕೆ ನೆಗೆದಾವೋ.
ಒಲುಮೆಯ ಹಬ್ಬ
ಕಳುತನದಿ ಈಕ್ಷಿಸಿದ
ಸೂರ್ಯ ಬಣ್ಣ ಬಣ್ಣದ
ಓಕುಳಿಯಾ ಆಡ್ಯಾನೋ.
=======
ಮರುದಿನ ಪ್ರೀತಿಯದು ಫಲಿಸಿ
ಕೋಟಿಕೋಟಿ ಜೀವಿಗಳು ಚಿಗುರಿಹವು
ತಿರೆಯ ಬೆತ್ತಲೆ ಮೈಗೆ
ಹಚ್ಚ ಹಸುರಿನ ಸೀರೆಯ ಉಡಿಸಿಹವು.
....ಪ್ರವೀಣ.
2 ಕಾಮೆಂಟ್‌ಗಳು:
ಕವಿತೆಯ ಆಳಕ್ಕೆ ಇಳಿದು ಭಾವಗಳ ಜೊತೆ ಈಜಾಡಿ , ಅರ್ಥಗಳ ಸ್ಪರ್ಶಿಸಿ ಮೇಲೆ ಬರುವ ಸಾಲುಗಳ ಕಲ್ಪನೆ ಸುಂದರ.. ಇದು.. ನಮ್ಮ ಮೊದಲ ಪ್ರತಿಕ್ರಿಯೆ ಇರಬಹುದು ನಿಮ್ಮ ಕವಿತೆಗಳಿಗೆ.. ಆದರೂ ಸಹ ತುಂಬಾ ತುಂಬಾ ಮೆಚ್ಚುಗೆಯಾದವು ಮತ್ತೆ ಮತ್ತೆ ಓದಲು.. & ಶುಭದಿನ.. :)
ಧನ್ಯವಾದಗಳು ಪ್ರಶಾಂತ್ ಅವರೇ..
ಕಾಮೆಂಟ್ ಪೋಸ್ಟ್ ಮಾಡಿ