ಶನಿವಾರ, ಮಾರ್ಚ್ 10, 2012

ಕಾಗೆಯ ಮಲ

ಅರ್ಧ ಕಿಲೋಮೀಟರ್ ಸನಿಹ ಸೂರ್ಯ
ಸಾವಿರ ಕಿಲೋಮೀಟರ್ ದೂರ ಜೀವ
ಭೂಮಂಡಲದ ಮಟಾಮಧ್ಯದಲ್ಲಿ
ಬಟಾಬಯಲಿನಲಿ ಅಲೆಯುತಿದ್ದೆ
ದಿಕ್ಕುಗಳು ಮಿಥ್ಯೆಯೆಂದು ಸಾಧಿಸುತ

ತಲೆಯ ಮೇಲೆ, ಕಿವಿಗಳ ಮೇಲೆ
ಮೇಣ್ ಬೆನ್ನ ಮೇಲೆ ಪತ್ ಎಂದು ಬಿತ್ತು
ಬೆರಳಲಿ ಹಿಡಿದು ನೋಡಿದರೆ ಕಾಗೆಯ ಮಲ

ಅಖಂಡ ಬ್ರಹ್ಮಾಂಡವೆಲ್ಲ ಅಲೆದು
ಅತಳ ವಿತಳ ಪಾತಾಳಗಳ ಹೊಕ್ಕು
ಹುಡುಕಿ ತುಂಡು ತುಂಡು ಮಾಡುವವರೆಗೆ ನಿನ್ನ
ಹನಿ ನೀರ ಮುಟ್ಟಲಾರೆನೆಂಬ ಪಣ ತೊಟ್ಟೆ
ಆಕ್ರೋಶದಾ ಅತಿಶಯದ ಘಳಿಗೆಯಲಿ

ಮೇಲೆ ನೋಡಿದರೆ ಸೂರ್ಯನೇ ಏಕಾಂಗಿ
ಕಣ್ಣು ಹರಿದಷ್ಟು ದೂರ ಗಾಳಿಯ ಪತ್ತೆಯಿಲ್ಲ
ಸೋಲೆಂಬುದೆನ್ನ ನಿಘಂಟಿನಲೇ ಇಲ್ಲ
ತೊಟ್ಟ ಪಣ ಮುಟ್ಟುವವರೆಗೆ ನಿದ್ದಿಲ್ಲ ನೀರಡಿಕೆಯಿಲ್ಲ

ಗಿಡ ಮರ ಕೊಂಬೆ ಬಾಗಿಲು ಕಿಟಕಿ
ಗುಡಿ ಗುಂಡಾರ ಅಂಗಡಿ ಭಂಡಾರ
ನದಿ ತೊರೆ ಭಾವಿ ಸಾಗರದಾಳ
ಸೂರ್ಯ ಚಂದ್ರ ನಕ್ಷತ್ರ ಗ್ರಹಗಳ
ಮನುಜ ಮತಿಯ ಕಲ್ಪನೆಯ ತಾಣಗಳ
ಎವೆಯಿಕ್ಕದೆ ಬೆನ್ನು ಹಚ್ಚದೆ ಅರಸಿದೆ

ನಾಚಿಕೆಯಿಲ್ಲದ ಹಸಿವು ಮಾನವಿಲ್ಲದ ದಣಿವು
ಮಾತುಗಳ ಗೌರವವೆನಿತಿಲ್ಲದ ನೀರಡಿಕೆ
ಕಾಗೆಯ ವಿಳಾಸ ಸಿಗುವ ಮೊದಲೇ
ನನ್ನ ಪ್ರಾಣ ತೆಗೆವ ಸಂಚು ಹೂಡಿದಂತೆ
ಧಸಕ್ಕನೆ ಮನೆಯೆಂಬೋ ಮನೆ ಸೇರಿದೆ

ಹಿತ್ತಲ ತುಂಬೆಲ್ಲ ಮಲ ಚೆಲ್ಲುವ
ಅಜ್ಜ ನೆಟ್ಟ ಮರಗಳ ಗಾಳಿಯ ಬಯಕೆಗೆ
ಮೆತ್ತಗೆ ಹಿತ್ತಿಲವಾಗಿಲ ತೆರೆದರೆ
ಕರಗಸದಂತೆ ಕೂಗುತಿಹ ಕಾಗೆಗಳ ಸೈನ್ಯ
ತಿಂದ ಸಿಟ್ಟೆಲ್ಲ ಹೊಟ್ಟೆಯಿಂದ ಹೊಡಮರಳಿ
ಎತ್ತಿದರೆ ಕತ್ತಿ ತಲೆ ಸುತ್ತಿ ಬವಳಿ

ತಲೆಯ ಮೇಲೆ ಹೇತ ಕಾಗೆಯ
ಗುರುತೆಲ್ಲಿ ಇಹುದೆನ್ನ ಬಳಿ

-------
ಫ್ರಿಜ್ಜಿನ ಬಾಗಿಲ ತೆಗೆದು
ಮಂಜುಗಟ್ಟಿದ ಬಾಟಲಿ ಎತ್ತಿ
ಜನ್ಮಾಂತರಗಳ ನೀರಡಿಕೆಯ ಕೊಂದುಬಿಟ್ಟೆ.

...ಪ್ರವೀಣ

2 ಕಾಮೆಂಟ್‌ಗಳು:

ರವಿ ಮುರ್ನಾಡು ಹೇಳಿದರು...

ಸುಂದರ ಕವಿತೆ ಕಟ್ಟುತ್ತೀರಿ ನೀವು.ಹಾಗೇ ಓದಿಸಿಕೊಂಡು ಹೋಗುವಲ್ಲಿ ನಿಮ್ಮ ತಾಕತ್ತು ಅಡಗಿರುವುದು,ಮೊದಲ ಸಾಲಿನಿಂದ ಪ್ರಾರಂಭವಾಗುವ ಪ್ರತಿಮೆ ವಿಸ್ತಾರದ ಸೊಬಗು, ಅದಕ್ಕೊಪ್ಪುವ ಪದಗಳು,ಪದಗಳಲ್ಲಿ ರೆಕ್ಕೆ ಬಿಚ್ಚಿ, ಇನ್ನಷ್ಟು ತೆರೆದುಕೊಳ್ಳುವ ಅರ್ಥಗಳು ತುಂಬಾ ಖುಷಿ ಕೊಡುತ್ತವೆ. ಈ ಕೆಳೆಗಿನ ಸಾಲು ಹೆಕ್ಕಿ ತೆಗೆವ ಸಾಲು. ಏಕೆಂದರೆ ಇದು ನಮ್ಮಲ್ಲೇ ಇದೆ.
ನಾಚಿಕೆಯಿಲ್ಲದ ಹಸಿವು ಮಾನವಿಲ್ಲದ ದಣಿವು
ಮಾತುಗಳ ಗೌರವವೆನಿತಿಲ್ಲದ ನೀರಡಿಕೆ

PRAVEEN K ಹೇಳಿದರು...

ರವಿ ಮೂರ್ನಾಡು ಅವರಿಗೆ ಧನ್ಯವಾದಗಳು..