ಶುಕ್ರವಾರ, ಜೂನ್ 8, 2012

ರಕ್ತದ ರುಚಿ


೨೦೦೩ರಲ್ಲಿ ಬರೆದ ಮತ್ತೊಂದು ಕವನ.


ರಕ್ತ ಎಷ್ಟೊಂದು ಸಿಹಿಯಾಗಿದೆ ಗೆಳೆಯ
ರಕ್ತ ಎಷ್ಟೊಂದು ಸೋವಿಯಾಗಿದೆ.

ಸಪ್ಪೆಯಾಗಿದೆ ಜ್ಯೂಸು, ಕೋಲ್ಡ್ರಿಂಕು,
ಎಳೆನೀರು, ಸೋಡಾ, ಶರಬತ್ತು,
ಕಬ್ಬಿನ ರಸ, ಹಾಲು, ಅಲ್ಕೋಹಾಲು.

ತಿಂದು ತಿಂದು ತುಂಬಿದೆ ಹೊಟ್ಟೆ,
ತುಂಬಿ ತೇಗಿದೆ ಹೊಟ್ಟೆ,
ತೇಗಿದ ಹೊಟ್ಟೆ ಜೀರ್ಣಕ್ಕೆಮಗೆ
ರಕ್ತವೇ ಪಂಚಾಮೃತ.

ಬುಷ್ಷು, ಮುಷ್ಷು, ಬ್ಲೇರು, ಗ್ಲೀರುಗಳಿಗೆಲ್ಲ
ರುಚಿ ಹತ್ತಿದೆ, ನಶೆಯೇರಿದೆ
ಮೈಮನಗಳಲ್ಲಿ ಉರಿಯೆಬ್ಬಿಸಿ
ಹುಯಿಲೆಬ್ಬಿಸಿರುವ ತೀಟೆ ತಣಿಯಬೇಕಿದೆ.
ಬೇಕಾಗಿದೆ, ರಕ್ತ ಬೇಕಾಗಿದೆ.

ಜಾತಿ ಭೇದವಿಲ್ಲ, ಮತಭೇದವಿಲ್ಲ
ದೇಶ, ಭಾಷೆ, ಲಿಂಗ ಭೇದವಿಲ್ಲ
ಪಂಡಿತ, ಪಾಮರ, ಬಡವ, ಬಲ್ಲಿದ
ಒಂದೇ ಬಣ್ಣದ ರಕ್ತ ಭೇದಕ್ಕೆ ಎಡೆಯಿಲ್ಲ.

*****
ನೆರೆಯಿರಲಿ, ಹೊರೆಯಿರಲಿ
ಕಾಲಕೆಳಗಿನ ಭುವಿಯಿಂದ ಚಿಮ್ಮುತಿರಲಿ
ಮುಗಿಲು ಸುರಿಸಲಿ, ನದಿ ಹರಿಸಲಿ,
ನನ್ನ ಹೃದಯ ಕಾರಂಜಿಯೇ ಹೊಮ್ಮುತಿರಲಿ,
ಬೇಕಾಗಿದೆ, ರಕ್ತ ಬೇಕಾಗಿದೆ.

ಚಂದದ ಹುಡುಗೀರ ಕಣ್ಣಲ್ಲಿ,
ಹದಿಹರೆಯದ ಹುಡಗೂರ ಕಣ್ಣಲ್ಲಿ,
ಬೊಚ್ಚ ಬಾಯ ನಗುವಿನ ಮುದಕೀರು,
ಹುಟ್ಟಿದ ಖಬರಿಲ್ಲದ ಕೂಸುಗಳು,
ಅಮ್ಮ, ಅಣ್ಣ, ತಂಗಿ, ಮಗಳ ಕಂಗಳಲ್ಲಿ
ಮನೆಯಲ್ಲಿ, ಮಸೀದಿಯಲಿ,
ಮಂದಿರ, ಬಸದಿ, ಚರ್ಚುಗಳಲ್ಲಿ,
ಕಲ್ಲು, ಮಣ್ಣು, ಗುಡ್ಡ ಬೆಟ್ಟಗಳಲ್ಲಿ
ಹೃದಯದಲಿ, ಗಾಂಧಿ ಫೋಟೋಗಳಲಿ
ಬರೀ ರಕ್ತ, ರಕ್ತ ಚಿಮ್ಮುತಿದೆ.

*****

ಪಿಳಿಪಿಳಿವ ಕಂಗಳಲ್ಲಿ
ಸುಳಿಸುಳಿವ ಬಂಗಳಲ್ಲಿ
ಕುರಿಗಳಲ್ಲಿ, ಹುಲಿಗಳಲ್ಲಿ,
ಗಿಳಿ, ಕೋಗಿಲೆ, ನವಿಲುಗಳಲ್ಲಿ
ಕುದುರೆಗಳಲ್ಲಿ, ಕತ್ತೆಗಳಲ್ಲಿ,
ಕೃಷ್ಣನ ಕೋಟಿ ಅವತಾರಗಳಲ್ಲಿ
ಮಡುವಲ್ಲಿ, ಒಡಲಲ್ಲಿ ಭೀಮದಾಹ,
ಎಂದೆಂದೂ ತೀರದ ಭೀಮದಾಹ.

ರಕ್ತ ಎಷ್ಟೊಂದು ಸಿಹಿಯಾಗಿದೆ ಗೆಳೆಯ
ರಕ್ತ ಎಷ್ಟೊಂದು ಸೋವಿಯಾಗಿದೆ.

1 ಕಾಮೆಂಟ್‌:

ಪುಷ್ಪರಾಜ್ ಚೌಟ ಹೇಳಿದರು...

ಮೂರು ಪೈಸೆಗೆ ಮೊನ್ನೆ ಮೊನ್ನೆ ಯಾರೋ ಮಾರಹೊರಟ ಕತೆ ಕೇಳಿದೆ. ಅಷ್ಟು ಅಗ್ಗವಾಗಿತ್ತು ರಕ್ತ. ಬಣ್ಣ ಕಳೆಗುಂದುವ ಲಕ್ಷಣ, ಕೆಂಪು ಕಳೆದು ಹೆಪ್ಪುಗಟ್ಟಿ ಕಪ್ಪಾಗುವ ಗುರಿಯತ್ತ ದಾಪುಗಾಲಿಡುತ್ತಿದ್ದೇವೆ. ಇದು ವಿಪರ್ಯಾಸ.

ಕವಿತೆಯ ರುಚಿ ಎನ್ನುವುದಕ್ಕಿಂತಲೂ ರಕ್ತದ ರುಚಿಯೊಳಗಿನ ಚಿಂತನೆ ಬಲು ಹಿಡಿಸಿತು.