ಭಾನುವಾರ, ಜೂನ್ 24, 2012

ಸಾಹಿತ್ಯ ತರಬೇತಿ


ಹಿಂದಿನ ಒಂದು ವಾರದಲ್ಲಿ ಎರಡು ಪುಸ್ತಕಗಳನ್ನು ಓದಿದೆ.  ಒಂದು ರಹಮತ ತರೀಕೆರೆಯವರ “ಅಂಡಮಾನ್ ಕನಸು”, ಎರಡು ಸ್ಪೇನಿನ ಗ್ಯಾಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಜ್ ಅವರ “ಲವ್ ಇನ್ ದ ಟೈಮ್ ಆಫ್ ಕಾಲರಾ”. ಇಂದು ಬೆಳಿಗ್ಗೆ ‘ವಿಜಯವಾಣಿ’ಯಲ್ಲಿ ಎಸ್.ಎಲ್.ಭೈರಪ್ಪನವರ ಸಂದರ್ಶನ ಓದಿದೆ.  ಅವರೆಲ್ಲ ಬರೆವ ಪರಿ, ಅವರ ಯೋಚನಾ ಶಕ್ತಿ, ಆಡುವ ಮಾತುಗಳು ನಾನು ತೃಣಕ್ಕೆ ಸಮಾನ ಎಂಬುದನ್ನು ಸಾರಿ ಹೇಳಿದಂತಿತ್ತು.  ರವೀಂದ್ರನಾಥ ಟ್ಯಾಗೋರ, ಶಿವರಾಮ ಕಾರಂತ, ಕುವೆಂಪು, ಬೇಂದ್ರೆ ಇವರೆಲ್ಲ ಜೊತೆಗೆ ನೆನಪಿಗೆ ಬಂದು ಅವರು ಏರಿದ ಉತ್ತುಂಗ ನಾನು ಕಾಣಲು ಸಾಧ್ಯವೇ ಎಂಬ ಪ್ರಶ್ನೆ ಹುಟ್ಟಿಸಿದವು.

ಅಂಥ ಸಾಧನೆಗಳನ್ನು ಮಾಡಬೇಕಾದರೆ ತಪಸ್ಸು ಮಾಡಬೇಕಾಗುತ್ತದೆ.  ಎಷ್ಟೆಲ್ಲ ಓದು, ಎಷ್ಟೆಲ್ಲ ಅನುಭವ, ಅಲೆದಾಟ, ಪರಿಶ್ರಮ ಬೇಕು ಎಂದೆಲ್ಲ ಅನಿಸತೊಡಗಿತು.  ವರ್ಷಾನುಗಟ್ಟಲೆ ಸಂಗೀತದ ರಿಯಾಜ್ ಮಾಡುವಂತೆ ಸಾಹಿತ್ಯದ ಅಭ್ಯಾಸ ಮಾಡಬೇಕು, ಅನೇಕಾನೇಕ ಪ್ರಯೋಗಗಳನ್ನು ಮಾಡಬೇಕು, ಬರೆಯುವ ರೂಢಿ ಮಾಡಿಕೊಳ್ಳಬೇಕು.  ಸಾಹಿತ್ಯವನ್ನು ಸಂಗೀತದೊಡನೆ ಹೋಲಿಸುವಾಗ ಇನ್ನು ಉಳಿದ ಕಲಾಪ್ರಕಾರಗಳೂ ಕೂಡ ಹಾಗೆಯೇ ಎಂಬ ಜ್ಞಾನೋದಯವಾಯಿತು.  ಯಾವುದೇ ಕಲೆಯನ್ನು ಎತ್ತಿಕೊಂಡರೂ ಉದಾ: ನಟನೆ, ನೃತ್ಯ, ಚಿತ್ರಕಲೆ, ಸಂಗೀತ, ಸಾಹಿತ್ಯ ಇವುಗಳಿಗೆಲ್ಲ ನಿರಂತರ ಪ್ರಯತ್ನ, ಪರಿಶ್ರಮ, ನಿಷ್ಠೆ, ತಾಳ್ಮೆ, ಉತ್ಕಟೇಚ್ಛೆ, ಅಪಾರವಾದ ಪ್ರೀತಿ ಇವುಗಳು ಬೇಕು. ಜೊತೆಗೆ ಒಬ್ಬ ಗುರುಗಳ ಮಾರ್ಗದರ್ಶನ, ತರಬೇತಿ ಕೂಡ ಅವಶ್ಯಕ.  ಸಾಹಿತ್ಯ ಒಂದನ್ನುಳಿದು ಮಿಕ್ಕ ಕಲಾಪ್ರಕಾರಗಳಿಗೆಲ್ಲ ತರಬೇತಿ ಸಿಗುತ್ತದೆ.  ಆದರೆ ಸಾಹಿತ್ಯಕ್ಕೆ ಪ್ರತ್ಯೇಕವಾದ ತರಬೇತಿ ನಮ್ಮ ದೇಶದಲ್ಲಿ ಇದ್ದಂತಿಲ್ಲ.

ಜೀವನದ ಯಾವುದೋ ಒಂದು ಪ್ರಸಂಗದಲ್ಲಿ, ಎಲ್ಲಿಯೋ ಸ್ಫೂರ್ತಿ ಪಡೆದು ಕತೆ, ಕವಿತೆ ಬರೆಯಲು ಪ್ರಾರಂಭಿಸುತ್ತೇವೆ.  ಬರೆದವುಗಳನ್ನು ಗೆಳೆಯರಿಗೆ ತೋರಿಸಿ ಹೊಗಳಿಕೆ ಗಿಟ್ಟಿಸಿಕೊಳ್ಳುತ್ತೇವೆ.  ನಂತರ ಸ್ವಲ್ಪ ಧೈರ್ಯ ಬಂದು ಸಮೀಪದಲ್ಲಿ ಸಿಗುವ ಹಿರಿಯ ಸಾಹಿತಿಗಳ ಮುಂದೆ ಬರೆದುದನ್ನು ಚಾಚುತ್ತೇವೆ.  ಅವರ ಸಲಹೆ, ಸೂಚನೆ, ಮಾರ್ಗದರ್ಶನ ದೊರೆತರೆ ಅನೇಕ ಸುಧಾರಣೆಗಳನ್ನು ಮಾಡಿಕೊಳ್ಳುತ್ತೇವೆ.  ಈಗೀಗ ಅಂತರ್ಜಾಲದ ಸಹಾಯದಿಂದ ಬ್ಲಾಗಗಳಲ್ಲಿ, ಫೇಸಬುಕ್ ತಾಣಗಳಲ್ಲಿ ಪ್ರಕಟಿಸಿ ಮತ್ತಷ್ಟು ಹೊಗಳಿಕೆ, ಪ್ರೇರಣೆ ಪಡೆಯುತ್ತೇವೆ.  ನಂತರ ಇನ್ನೊಂದಿಷ್ಟು ಆತ್ಮವಿಶ್ವಾಸ ಮೂಡಿ ಪತ್ರಿಕೆಗಳಿಗೆ ಕಳುಹಿಸಿಕೊಡುತ್ತೇವೆ.  ಅಲ್ಲಿ ಪ್ರಕಟವಾದರೆ ತಾನೊಬ್ಬ ಸಾಹಿತಿ ಎಂದು ನಂಬಲು ಶುರುಮಾಡುತ್ತೇವೆ.

ಆದರೆ ಈ ರೀತಿಯಾಗಿ ಅಡ್ಡಾದಿಡ್ಡಿಯಾಗಿ ಬೆಳೆವ ಸಾಹಿತ್ಯ ಎಲ್ಲಿಯೋ ಒಂದು ಕಡೆಗೆ ಎಡವಿ ನಿಂತುಬಿಡುವ ಅಪಾಯವಿದೆ.  ಸರಿಯಾದ ಮಾರ್ಗದರ್ಶನ ಸಿಗದೆ ದಾರಿ ತಪ್ಪುವ ಸಾಧ್ಯತೆಯಿದೆ.  ಅನೇಕ ಹಿರಿಯ ಸಾಹಿತಿಗಳ ಪುಸ್ತಕಗಳನ್ನು ಓದಿ ಸ್ಫೂರ್ತಿ ಪಡೆದು ಅವರಂತೆ ಅನುಕರಣೆ ಮಾಡಲು ಪ್ರಯತ್ನ ಪಡುವುದಿದೆ.  ಆದರೆ ಯಾವುದೇ ಕಲೆಗೆ ಇದೊಂದು ಶಿಸ್ತುಬದ್ಧವಾದ ಪ್ರಕ್ರಿಯೆಯಲ್ಲ.  ಉಳಿದ ಕಲೆಗಳಿಗೆ ದೊರಕುವಂತೆ ನಿಯಮಿತವಾದ, ಶಿಸ್ತಿನಿಂದ ಕೂಡಿದ, ಗುರುಗಳ ಮಾರ್ಗದರ್ಶನದಲ್ಲಿ ತರಬೇತಿ ಸಿಕ್ಕಿದ್ದೇ ಆದಲ್ಲಿ ಸಾಹಿತ್ಯ ಇನ್ನೂ ಸುಂದರವಾಗಿ ಅರಳಿ ಬರಬಹುದು.   ಅನೇಕ ದೇಶಗಳಲ್ಲಿ “ಕ್ರಿಯೇಟಿವ್ ರೈಟಿಂಗ್ ಕೋರ್ಸ್” ಎಂಬ ತರಬೇತಿಗಳು ಲಭ್ಯವಿವೆ.  ಅವನ್ನು ನಾವು ಅನುಕರಿಸಬಹುದೇನೋ?  ಯಾವುದೇ ತರಬೇತಿ ಇಲ್ಲದೇ ಕೂಡ ಅಜರಾಮರ ಕೃತಿಗಳನ್ನು ಕೊಟ್ಟಿರುವ ಸಾಹಿತಿಗಳು ನಮ್ಮ ಮಧ್ಯೆ ಇದ್ದಾರೆ.  ಆದರೆ ಈ ರೀತಿ ತರಬೇತಿ ದೊರಕಿದ್ದೇ ಆದಲ್ಲಿ ಮಾರ್ಗದರ್ಶನ, ತರಬೇತಿಯ ಕೊರತೆಯಿಂದ ಬಾಡಿಹೋಗುವ ಪ್ರತಿಭೆಗಳ ಸಂಖ್ಯೆ ಕಡಿಮೆಯಾಗುತ್ತದೆ.  ಅದರಿಂದ ನಾವು ಇನ್ನೂ ಅದ್ಭುತವಾದ ಸಾಹಿತ್ಯವನ್ನು ಆಸ್ವಾದಿಸುವ ಭಾಗ್ಯವನ್ನು ಪಡೆಯಬಹುದೇನೋ ಎಂಬ ಆಶೆ ನನಗೆ.

1 ಕಾಮೆಂಟ್‌:

|| ಪ್ರಶಾಂತ್ ಖಟಾವಕರ್ || *Prashanth P Khatavakar* ಹೇಳಿದರು...

ನಿಮ್ಮ ಆಲೋಚನೆ ಸರಿಯೇ ಇದೆ.. ನಿಮ್ಮಂತವರಿಗೆ ಅದರ ಅಗತ್ಯ ಇದೆ.. ಅನ್ನಿಸುವುದು ತಪ್ಪೇನಿಲ್ಲ.. ಹಾಗೂ ನೀವು ಬಯಸುವ ಆ ಮಾರ್ಗದರ್ಶನ ಸಿಗಲು ಸ್ವಲ್ಪ ಕಷ್ಟವೇನೋ ಕಾರಣ ಸಾಹಿತಿಗಳು ಎಂದರೆ (ನಮ್ಮ ಅನಿಸಿಕೆಯಲ್ಲಿ ಮಾತ್ರ) ಅವರು ಬರಿಯುವುದೇ ಅವರ ಜೀವನಾಧಾರ ಆದಾಗ , ಅದರಿಂದಲೇ ಅವರ ಸಂಸಾರ ನಡೆಯುವಾಗ ಮತ್ತೊಬ್ಬರಿಗೆ ಹೇಳಿಕೊಟ್ಟು , ಅವರನ್ನು ಬೆಳೆಸಲು ಸ್ವಲ್ಪ ಕಷ್ಟ ಆನಿಸಿತ್ತದೆ.. :)
ಬೇರೆ ಬೇರೆ ಕಲೆಗಳಲ್ಲಿ ಆದಲ್ಲಿ (ಚಿತ್ರಕಲೆ , ನೃತ್ಯ , ಕ್ರೀಡೆ , ಸಂಗೀತ ... ) ಅಲ್ಲಿ ಗುರುವಾಗಿ ಮತ್ತೊಬ್ಬರಿಗೆ ಕಲಿಸುತ್ತಾ ದುಡಿಯಬುದು .. ಆದರೆ ಅದು ಸಾಹಿತ್ಯದಲ್ಲಿ ತುಂಬಾ ವಿರಳ... ಇಲ್ಲೇನಿದ್ದರೂ ಸ್ವಂತ ಓದಬೇಕು , ಯೋಚಿಸಬೇಕು , ಬರೆಯಬೇಕು .. ಅಷ್ಟೇ.. ಅದಕ್ಕೆ ಜನರು ಎಷ್ಟು ಮೆಚ್ಚುತ್ತಾರೋ , ಪ್ರೋತ್ಸಾಹದ ಮಾತುಗಳನ್ನು ಹೇಳುತ್ತಾರೋ ಅದರ ಆಧಾರದಲ್ಲಿ ಲೆಕ್ಕ ಹಾಕಿ ಕೆಲವರು ಪುಸ್ತಕ ಪ್ರಕಟಿಸುತ್ತಾರೆ , ಕೆಲವರು ಸಿನಿಮಾದಲ್ಲಿ ಬಳಸುತ್ತಾರೆ , ಇನ್ನು ಅವುಗಳಿಗೆ ಎಷ್ಟು ಪ್ರಶಸ್ತಿಗಳು ಸಿಗುತ್ತವೆ ಅನ್ನುವುದನ್ನು ನೋಡಿ ಅದರಿಂದ ಗೌರವ ಹೆಚ್ಚುತ್ತದೆ .. ಹೀಗೆಯೇ ಬರೆಯಬೇಕು ಅನ್ನುವುದು ಸಾಹಿತ್ಯದಲ್ಲಿ ಒಂದು ವಿಧ ಆದರೆ ಜನಕ್ಕೇನು ಬೇಕು ಅನ್ನುವುದು ಬರೆಯುವುದು ಮತ್ತೊಂದು ವಿಧ .. ಕೆಲವು ಸಾರ್ವಕಾಲಿಕ ಸಾಹಿತ್ಯ ಮತ್ತೆ ಹಲವು ಕ್ಷಣಿಕ ಸಂತಸದ ಸಾಹಿತ್ಯ .. ಒಟ್ಟಿನಲ್ಲಿ ಬರೆಯುವುದರಲ್ಲಿ ಓದುಗನಿಗೆ ಬರೆದ ಆ ವಿಷಯದ ವಿಚಾರವು ಅರ್ಥವಾಗಿ ಅದರಿಂದ ಜೀವನಕ್ಕೆ ಉತ್ತಮ ಅಂಶಗಳು ಸಿಕ್ಕರೆ ಅದು ಒಳ್ಳೆಯದು ಎಂದು ನಮ್ಮ ಅನಿಸಿಕೆ + ಅಭಿಪ್ರಾಯ .. :)