ಶನಿವಾರ, ಜುಲೈ 21, 2012

ಸಂಕಲ್ಪದ ಬಗೆಗೆ ಗೆಳೆಯ ಪುಷ್ಪರಾಜ ಚೌಟ ಅವರ ವಿಮರ್ಶೆ..ಸಂಕಲ್ಪ, ನಾನು ಮತ್ತು ಅದಕ್ಕೊಂದೆರಡು ಮಾತು......
============
ಅವತ್ತು ಭಾನುವಾರ, ಒಂದು "ಸಂಕಲ್ಪ"ವನ್ನು ಮನದೊಳಗಿಟ್ಟುಕೊಂಡು ಕೂತೆ. ಕಾದಂಬರಿಯೊಂದ ಓದಿಮುಗಿಸಿಬಿಡುವುದಾಗಿತ್ತು ಆ ಸಂಕಲ್ಪ.

ಮೂಲತಃ ಕರಾವಳಿಯವನಾದರೂ ಉತ್ತರಕರ್ನಾಟಕದ ನನ್ನ ನಂಟು ಸರಿ ಸುಮಾರು ಎರಡು ಸಾವಿರನೇ ಇಸವಿ ಜನವರಿ ಒಂದರಿಂದ ಮುಂದುವರಿದಿದೆ. ಅಲ್ಲಿ ಇಲ್ಲಿ ಸಿಕ್ಕಲ್ಲೆಲ್ಲ "ಏನ್ರಿ ಸರ್ರ ಆರಾಮದಿರೇನ್" ಎಂದು ಕೇಳುವ ನನ್ನ ಧಾಟಿ "ಎಂಥಾ ಮಾರಾಯ" ಅಂಥಾ ಮಂಗಳೂರು ಕನ್ನಡ ಮಾತನಾಡುವ, ಜೊತೆಗೊಂದಿಷ್ಟು ಬೆಂಗಳೂರಿನ "ಏನ್ ಗುರು ಕಾಫಿ ಆಯ್ತಾ?" ಗಳ ನಡುವೆ ನಾನು ಮರೆತಿಲ್ಲ ಎಂದರೆ ನನಗಿನ್ನೂ ಆ ಗ್ರಾಮ್ಯ ಭಾಷೆಯ ಸೊಗಡಿನ ಪ್ರೀತಿ ಹೋಗಿಲ್ಲ ಎಂಬ ಹೆಮ್ಮೆಯಿದೆ. ಹೊಟ್ಟೆಪಾಡಿಗಾಗಿ ಬೆಂಗಳೂರಿನ ಹೊಗೆ ತಿನ್ನುತ್ತಿದ್ದರೂ, ಆಕಸ್ಮಿಕವಾಗಿ ಹುಬ್ಬಳ್ಳಿಯಲ್ಲೇ ಕೂತು ಈ ತುಣುಕನ್ನು ಬರೆಯುವ ಭಾಗ್ಯ ಸಿಕ್ಕಿದೆ ಎಂದಾದರೆ ಬಹುಷಃ ಈ ಗಂಡು ಮೆಟ್ಟಿದ ನಾಡಿನ ನಂಟು ನನ್ನನ್ನು ಬಿಡಲಾರದು ಎಂಬುದು ಮತ್ತೆ ನಾನು ಪ್ರಚುರಪಡಿಸಬೇಕಾಗಿಲ್ಲ. ನಾನಿದನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ ನಾನು ಕೈಗೆತ್ತಿಕೊಂಡ ಸಂಕಲ್ಪವನ್ನು ನಾನು ಓದುವಾಗ ಆ ಭಾಷೆಯ 'ರಗಡ್' ಪರಿಚಯವಿಲ್ಲವಾದರೂ, ಕಿಂಚಿತ್ ಅರಿವಿರಲೇ ಬೇಕು.

ಸಾಮಾನ್ಯವಾಗಿ ನಾನು ಈ ಲವ್-ಮ್ಯಾರೇಜ್-ಗಳನ್ನು ಇಷ್ಟಪಟ್ಟವನಲ್ಲ!.
ಏನ್ರೀ ಸರ್ರ್ ಅಸಂಬದ್ಧ ಪ್ರಲಾಪವಿದು? ಉತ್ತರಕರ್ನಾಟಕದಿಂದ ನೇರವಾಗಿ ಪ್ರೀತಿ-ಪ್ರೇಮ-ಮದುವೆ ಬಗ್ಗೆ ಹೊರಟ್ಟಿದ್ದೀರಿ ಎನದಿರಿ. ಹೌದು ನಾನು ಹೇಳಹೊರಟಿರುವ ವಿಷಯಕ್ಕೂ ಉತ್ತರಕರ್ನಾಟಕಕ್ಕೂ ಸಂಬಂಧವಿದೆ ಎನ್ನುವುದು ನಿಮಗೆ ತಿಳಿದಿರಬೇಕಾದ ಸತ್ಯ. ಹಾಗಂತ ಈ ಲವ್ ಮ್ಯಾರೇಜ್ ಒಳಗಿನ ಅಂಶಗಳು ಕೇವಲ ಉತ್ತರಕರ್ನಾಟಕಕ್ಕೆ ಸೀಮಿತವಲ್ಲ. ನಾನು ಹೇಳಹೊರಟಿರುವ ಸಂಕಲ್ಪದ ಕತೆಯೊಳಗಿನ ಬಹುತೇಕ 'ಮಂದಿ' ಆ ಕಡೆಯವರು ಎನ್ನುವುದು ನಿಮಗೆ ಗೊತ್ತಿರಲಿ.

ಇನ್ನು ಜಾತಿ ಮತ್ತು ಈ ಪ್ರೀತಿ, ಪ್ರೇಮ. ಒಂದು ಗಂಡು-ಹೆಣ್ಣು ಪ್ರೀತಿಯ ತೆಕ್ಕೆಗೆ ಸಿಕ್ಕಾಗ ಅಲ್ಲಿ ಜಾತಿ ನಗಣ್ಯವಾಗುತ್ತದೆ. ಜಾತಿಯ ಕಂದಕಗಳನ್ನು ಒಂದುಗೂಡಿಸುವ ಬಹುದೊಡ್ಡ ಅಂಟು ಕಂಪನಿಯೆಂದರೆ ಅದು "ಪ್ರೀತಿ" ಅಂಟು!. ಇಲ್ಲಿ ಪ್ರೀತಿ ಎಂದಾಗ ನಮ್ಮ ಹೆಚ್ಚಿನ ಯುವಮನಸುಗಳಲ್ಲಿ ಮೂಡುವ ಭಾವನೆಯೆಂದರೆ ಅದು ಹೆಣ್ಣು-ಗಂಡಿನ ನಡುವಿನ ಆಕರ್ಷಣೆ. ಆದರೆ ಅದಕ್ಕೆ ಮಿಗಿಲಾದ ಒಂದು ಭಾವವಿದೆ ಎನ್ನುವುದನ್ನು ನಾನು ಸ್ವಂತ ಅನುಭವವಿಲ್ಲವಾದರೂ ಈ ಸಂಕಲ್ಪದೊಳಗೆ ಕಂಡಿದ್ದೇನೆ. ಆದರೆ ಜಾತಿ ಎನ್ನುವುದು ದೊಡ್ಡದಾಗಿ ನಿಲ್ಲುವುದು ಆ ಕಟ್ಟುಪಾಡಿಗೆ ಗಂಟುಬಿದ್ದ ಕೆಲವು ಮನಸುಗಳು ಈ ಪ್ರೀತಿ ಎಂಬ ಎರಡಕ್ಷರದೊಳಗಿನಂಟಿಗೆ ತಣ್ಣೀರು ಎರಚಿ ಬಿಡುವ ಪ್ರವೃತ್ತಿಯವರಾದಾಗ ಆ ಪ್ರೀತಿಯೊಳಗೆ ಬೇರುಬಿಟ್ಟ ಜೀವಗಳು ಉಸಿರು ಹಿಡಿದು ಹೋರಾಟ ನಡೆಸಬೇಕಾದ ಪ್ರಮೇಯ ಬರುವುದು ಎಲ್ಲಿ ನೈಜತೆಯ ಪ್ರೇಮವಿದೆಯೋ ಅಲ್ಲಿ ಮಾತ್ರವೇ ಹೊರತು ನಾನು ಈ ಮೊದಲೇ ಹೇಳಿದ ಆಕರ್ಷಣೆಯ ಎರಡು ಘಳಿಗೆಯ ವಾಂಛೆಯಲ್ಲಲ್ಲ. ಈ ನಿಟ್ಟಿನಲ್ಲಿ ನಾನು ಹೇಳಹೊರಟಿರುವ 'ಸಂಕಲ್ಪ'ದಲ್ಲಿನ ಎರಡು ಜೀವಗಳು ಅಲ್ಲಲ್ಲಿ ಜಾತಿಯ ಹೊಗೆಯಲ್ಲಿ ಬೆಂದಂತೆ ಕಂಡರೂ, ಚತುರ ವಿವರಣೆಯಲ್ಲಿ ಅದನ್ನು ಒತ್ತಿಹೇಳುವಲ್ಲಿ ಸಫಲತೆಯಿದೆ ಎಂದರೆ ತಪ್ಪಾಗಲಾರದು. ಇಲ್ಲಿ ಜಾತಿ ಧರ್ಮದ ವಿಷಯ ಬಂದಾಗ ಮಾನವಧರ್ಮವನ್ನು ಕಡೆಗಣಿಸಿ ಅನ್ಯಧರ್ಮೀಯ ಎಂದು ಕರೆಸಿಕೊಳ್ಳಲ್ಪಡುವ ಒಂದು ಹೆಣ್ಣನ್ನು ಪ್ರೀತಿಸಿದ ಯುವಕ, ತಾನು ಕೈಗೊಂಡ ಸಂಕಲ್ಪವನ್ನು ನೆರವೇರಿಸಿಯೇ ತೀರುತ್ತೇನೆ ಎಂಬ ಪಣ ಕಂಡುಬಂತಾದರೂ ಎಲ್ಲೋ ಒಂದೆರಡು ಕಡೆ ಅವನ ಮನಸೂ ಕೂಡ ಅವಳ ಜೊತೆ ಬಿರುಕಿನೆಡೆಗೆ ತೆರಳಿದ್ದೂ ಇದೆ. ಈ ಭಾವ ಪ್ರೀತಿಯೊಳಗೆ ಮಾಮೂಲು ಎಂದೆಣಿಸಿಕೊಳ್ಳುವುದಾದರೆ ನನ್ನ ಮನಸಿನಲ್ಲಿ ಕೂಡ ಅಂಥಹ ಈ ವಿಷಯದ ಬಗ್ಗೆ ಅಭ್ಯಂತರ ಹುಟ್ಟುವುದಿಲ್ಲ.

ಹೀಗೆ ಕತೆ ಸಾಗುವುದು ಕೇವಲ 'ಒಂದು ಪ್ರೀತಿಯ ಸುತ್ತ' ಎಂದರೆ ಅದು ನನ್ನ ಶಾಣೇ ತಪ್ಪಾದೀತು. ಅಲ್ಲಿ ಮಮತೆ ಎನ್ನುವ ಬಳ್ಳಿಯ ಅರಳುವಿಕೆಯಿದೆ. ಸ್ನೇಹ ಎನ್ನುವ ಒಂದು ಆವರಣವಿದೆ. ಆ ಆವರಣದೊಳಗೆ ಬೆಲೆ ಕಟ್ಟಲಾಗದ ಅಂಶಗಳನ್ನು ಎತ್ತಿಹಿಡಿಯಲಾಗಿದೆ. ತದ್ವಿರುದ್ಧವಾಗಿ ಸಮಾಜಸೇವೆ ಎನ್ನುವ ಮುಖವಾಡಗಳ ಬಣ್ಣಕಳಚುವ ಕಿರಿಯ ಪ್ರಯತ್ನ ಕೂಡ ಸಂಕಲ್ಪದ ಸರದಾರ ತೋರಿಸಿದ್ದಾರೆ. ಇದಕ್ಕೆಲ್ಲಕಿಂತಲೂ ಮುಖ್ಯವಾಗಿ ಒಂದು ಕಡೆ ಹೆತ್ತವರ ಅಳಲು, ಹೆತ್ತವರ ಮೇಲಿನ ಮಮಕಾರಗಳನ್ನೂ ಸೂಕ್ಷ್ಮವಾಗಿ ಗಮನಿಸಿದೆ ಈ ಸಂಕಲ್ಪ. ಮಿಗಿಲಾಗಿ ಹೆತ್ತವರೆಂದು ಕರೆಸಿಕೊಳ್ಳುವ ಪಾತ್ರಗಳೂ ಕೂಡ ತಮ್ಮ ಬದಲಾಗದ ಮನಸ್ಥಿತಿಯೊಂದಿಗೆ ಮುಗ್ಧತೆಗಳನ್ನು ತುಳಿಯುವ ಮನಸು ಮಾಡುವುದು ಇಲ್ಲಿನ ವಿಪರ್ಯಾಸ.

ಇನ್ನು ಈ ಮೊದಲೇ ಹೇಳಿದಂತೆ ಇಲ್ಲಿ ಬಂದು ಹೋಗುವ ಪಾತ್ರಗಳು. ಯಾವ ಪಾತ್ರಗಳು ಕೂಡ ಸುಮ್ಮನೇ ಕೂತಿಲ್ಲ!. ಹಾಗೇ ಬಂದು ಹೀಗೆ ಹೋದಂತಿಲ್ಲ. ಎಲ್ಲವನ್ನೂ ಮಾತನಾಡಿಸುವ ಯೋಜಿತ ಬರಹ ರೂಪುರೇಷೆ ಸಂಕಲ್ಪದ ಪ್ರಮುಖದ ಅಂಶ. ಆದರೆ ಎಲ್ಲಾ ಪಾತ್ರಗಳನ್ನು ಮಾತಾನಾಡಿಸುವ ಗೋಜಿನಲ್ಲಿ ಸಂಕಲ್ಪದೊಡೆಯನ ಹೆಚ್ಚಿನ ಮಾತಿನ ಇಚ್ಛೆ ಓದುಗನ ಮನವನ್ನು ಸಂಭಾಷಣೆಗಳಿಂದ ಹಾರಿಸಿಬಿಡಬಹುದು ಎನ್ನುವ ಭಯ ಕೂಡ ನನಗೆ ಕಾಡದಿರಲಿಲ್ಲ. ಏನೇ ಇರಲಿ 'ಪ್ರಥಮಚುಂಬನಂ ದಂತಭಗ್ನಂ' ಅಲ್ಲವೇ ಅಲ್ಲ ಎನ್ನುವ ಪ್ರಮಾಣಪತ್ರ ಕೊಡಬಹುದಾದರೂ ಅತಿ ಕಿರಿಯನಾಗಿ ನಾನದಕ್ಕೆ ಹೆದರಿದರೂ, ಕೊಡದೇ ಇರಲಾರೆ.

ಕೊನೆಯದಾಗಿ, ನಾನು ಹೇಳಬಹುದಾದ ಮಾತೆಂದರೆ ಇದೊಂದು ಪ್ರೇಮಕಾದಂಬರಿಯಾಗಿ ನಿಲ್ಲಲ್ಲಿಲ್ಲ ಎನ್ನುವ ಸತ್ಯ ಮತ್ತು ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು ಎನ್ನುವ ವಾಸ್ತವಿಕತೆಯ ನೆಲೆಗಟ್ಟಿನಲ್ಲಿ, ಸುಶಿಕ್ಷಿತ ವಾತಾವರಣದಲ್ಲೂ ಅಂತರ್ಧರ್ಮೀಯ ತೊಳಲಾಟವನ್ನು ಹೊಡೆದೋಡಿಸಿ, ಗುಣಾತ್ಮಕ ಅಂಶಗಳನ್ನು ಮನಸ್ಸಿನಲ್ಲಿ ಉಳಿಸಿಕೊಳ್ಳುವಲ್ಲಿ ಸಫಲ ನಾನು ಹೇಳಹೊರಟ "ಸಂಕಲ್ಪ".

2 ಕಾಮೆಂಟ್‌ಗಳು:

Badarinath Palavalli ಹೇಳಿದರು...

ಈ ಕಾದಂಬರಿಯನ್ನು ನಾನು ಓದುತ್ತೇನೆ ಸಾರ್.

ಧನ್ಯವಾದಗಳು ಹೂವಪ್ಪ.

PRAVEEN K ಹೇಳಿದರು...

ಅನೇಕ ಧನ್ಯವಾದಗಳು ಬದರೀನಾಥ ಸರ್. ಓದಿ ತಮ್ಮ ಅಭಿಪ್ರಾಯ ತಿಳಿಸಿ ತಿದ್ದಿಕೊಳ್ಳಲು ಅವಕಾಶ ಕೊಡಿ.
ಪ್ರೀತೀಶ..