ಶುಕ್ರವಾರ, ಫೆಬ್ರವರಿ 24, 2012

ಒಂದು ಹನಿ ಅಮೃತ

ಒಂದು ಹನಿ ಅಮೃತ
-----------------

ಬ್ರಹ್ಮಾಂಡವೆಲ್ಲಾ ಅಲೆದು
ಬಳಲಿ ಬೆಂಡಾಗಿ ಬಂದ ಮನಕ್ಕೆ
ಕಂಡಿದ್ದು ನೀನು....

ವೀಳ್ಯೆದೆಲೆ, ಸುಣ್ಣ, ಕಾಚು,
ಅಡಿಕೆಯನ್ನು ಮಡಚಿ
ಆಲಸಿ ಮಧ್ಯಾಹ್ನದಲಿ
ಕಟ್ಟೆಯ ಮೇಲೆ ಕುಳಿತು
ಮೆಲ್ಲಿದಂತಾಹ್ಲಾದಗೊಂಡಿತು.

ಬಾಗಿಲು ತಟ್ಟಿ ಒಳಬಂದ
ಕೋಗಿಲೆಯ ನಿನಾದಕೆ
ದಿಟ್ಟಿ ನೆಟ್ಟಿದ್ದು ನಿನ್ನ
ಕಣ್ಣ ಒಳಗೆ ಸಿಕ್ಕ ಕೂದಲಲಿ

ಓದಬೇಕೆಂದುಕೊಂಡರೆ
ಅಂಗಳ, ಗೋಡೆ, ಬೀದಿ,
ಸರ್ರನೆ ಜಾರುವ ಕಾರುಗಳು,
ಕಂಬ, ಸಂಬಂಧಗಳೆಲ್ಲ
ಚೀರಾಡಿಬಿಟ್ಟವು...

ನಿನ್ನ ಮನದ ಭಾವಗಳೆಲ್ಲ
ಚದುರಿ, ಸಿಡಿದದ್ದೊಂದು
ನೆಟ್ಟಿತು ಎನ್ನ ಎದೆಯ ಒಳಗೆ.
ಕಿತ್ತು ತೆಗೆದರೆ ಒಸರಿದ್ದು
ರಕ್ತವಲ್ಲ, ಒಂದು ಹನಿ ಅಮೃತ

ಸುವಾಸನೆಗೆ ಮನವೆಲ್ಲಾ
ಘಮಫಮನೆ ಅರಳಿತು.

.....ಪ್ರವೀಣ

ಸೋಮವಾರ, ಫೆಬ್ರವರಿ 20, 2012

ಸೂತ್ರ


ನಾಳೆಯ ಉಳಿಕೆಗಾಗಿ
ಇಂದು ಭಗ್ಗನೆ ಉರಿದು
ಭಗ್ನಗೊಂಡಿತು ಮನವು

ನಾಳೆಯ ನೆಗಡಿಗೆ ಬೆದರಿ
ಇಂದಿನ ಮಳೆಯಲಿ ನೆನೆಯದೆ
ಶುಷ್ಕವಾಯಿತು ಹೃದಯ

ಇಂದು ಮತ್ತೆಂದೂ ಬರದು
ಬಂದ ಅನುಭವ ಉಂಡು
ತೇಗುವುದಷ್ಟೇ ಸಿರಿತನ

ನೆನ್ನೆಯನು ಕುಕ್ಕಿಸದೆ
ನಾಳೆಯನು ಲೆಕ್ಕಿಸದೆ
ಇಂದು ಉಕ್ಕಿದುದೆ ಗೆಳೆತನ

ನೆನ್ನೆಯ ಉತ್ತರ ಕಂಡು
ನಾಳೆಯ ಪ್ರಶ್ನೆಗಳಿಗೆ
ಸೂತ್ರ ಕಟ್ಟಿದ್ದು ಇಂದು

ನೆನ್ನೆ ಕಳೆದ ಸಿಂಧು
ನಾಳೆ ಆಶಿಸುವ ಬಿಂದು
ಎರಡರ ಸಂಧಿ ಇಂದು

ಭೂತಗಳಿಗೆ ಹೆದರದೆ
ಭವಿಷ್ಯತ್ತಿನಲ್ಲಿ ಕಳೆಯದೆ
ಇಂದು ಆನಂದದಿ ತೇಲಲಿ

ನೆನ್ನೆಯ ಮಧುರ ನೆನಪು
ನಾಳೆಯಭ್ಯುದಯದ ಕನಸು
ಇಂದಿನ ದಿನವನು ರೂಪಿಸಲಿ.

...ಪ್ರವೀಣ.

ಶುಕ್ರವಾರ, ಫೆಬ್ರವರಿ 17, 2012

ಅಲೆಮಾರಿಗಳು ನಾವೆಲ್ಲಾ


ಅಲೆಮಾರಿಗಳು ನಾವು....

ಘಳಿಗೆಯ ತಿಳಿವಿಲ್ಲದೆ
ಗುಳೆ ಹೊರಟವರು ನಾವು
ಗಡಿಯಿಲ್ಲ, ಗುಡಿಯಿಲ್ಲ,
ಮಡಿಯಿಲ್ಲ, ದಮ್ಮಡಿಯಿಲ್ಲ

ಲಕ್ಷಾಂತರ, ಕೋಟ್ಯಾಂತರ
ಹಾಳಾಗಿ ಹೋದಾಗಲೇ
ಫಳಫಳನೆ ಹೊಳೆವೊಂದು
ಕುಳ ಇಳೆಗೆ ಇಳಿವುದು

ಹುಟ್ಟಿದ್ದೇ ಊರು
ಸಾಗಿದ್ದೆ ದಾರಿ
ತಲುಪಿದ್ದೆ ಗುರಿ
ನಾನೀನೆಂಬ ಹಮ್ಮಿಲ್ಲ ಬಿಮ್ಮಿಲ್ಲ

ಹೊಟ್ಟೆಗೆ ಹೊಟ್ಟೆಯನಂಟಿಗೆ
ತೃಷೆಯಾಗಿ, ಸರಿ ತಪ್ಪು
ಬಗೆಯದೆ, ತಿರೆಯಲೆದು
ತೃಪ್ತಿ ಕಂಡೇವು

ಅಲೆಮಾರಿಗಳು ನಾವು..

ಸೂರ್ಯನೇ ಸಿಟ್ಟಾಗಿ
ಗಗನಕೆ ದುಃಖಾಗಿ
ಗಾಳಿಯೇ ಸತ್ಹೋದ್ರೂ
ಸಿರಿವಂತಿಗೆ ಸೊರಗಿಲ್ಲ

ಹಿಂದೆ ನೆರಳಿಲ್ಲ
ಮುಂದೆ ಬೆಳಗಿಲ್ಲ
ಕ್ಷಣಕಾಲದ ಮಿಂಚಿಗೆ
ಜನ್ಮವೆಲ್ಲಾ ನಲಿದೆವು

ನೆಲದಲ್ಲಿ ಬೇರೂರಿ
ಕಾಂಡಗಳನೆಲ್ಲ ಚಾಚಿ
ಪರಸುಖವನಾಶಿಸದೆ
ಇಹದಲ್ಲೇ ಸಗ್ಗ ಕಂಡೇವು

ಅಲೆಮಾರಿಗಳು ನಾವು..
ಘಳಿಗೆಯ ತಿಳಿವಿಲ್ಲದೆ
ಗುಳೆ ಹೊರಟವರು ನಾವು

ಪ್ರವೀಣ..

ಗುರುವಾರ, ಫೆಬ್ರವರಿ 9, 2012

ಮತ್ತೆಲ್ಲಿ


ಮೋಸ ಮಾಡಿ ಕಾಗೆಯ
ಬಾಯಿಂದ ಮಾಂಸ ಲಪಟಾಯಿಸಿದ
ನರಿಯ ಚಾಣಾಕ್ಷ ಎಂದು
ಮೆಚ್ಚುವ ನಾವು..

ನಿಯಮಗಳನೆಲ್ಲ ಗಾಳಿಗೆ ತೂರಿ
ಸುಳ್ಳು ಹೇಳಿ, ಷಂಡನಡ್ಡ ತಂದು,
ರಾಜ್ಯದಾಮಿಷ ತೋರಿಸಿ ವಂಚನೆಯಿಂದ
ಯುದ್ಧ ಗೆಲುವ ಕಲೆ ಹೇಳಿಕೊಟ್ಟವನ
ದೇವರ ಮಾಡಿ ಪೂಜಿಸುವವರು ನಾವು..

ಸ್ನಾನದಲಿ ಮೈಮರೆತ ಹೆಂಗಳ
ಸೀರೆ ಕದ್ದವನ ಲೋಲುಪತೆಯನ್ನು
ಲೀಲೆಯೆಂದು ಹಾಡಿ
ಬಾಲ್ಯದಿಂದಲೇ ಕದಿಯುವ ಚಟದವನಿಗೆ
ವಿಶ್ವಕ್ಕೆ ಬುದ್ಧಿ ಹೇಳುವ ಪಟ್ಟ ಕಟ್ಟಿದವರು..

ಅರ್ಧಾಂಗಿಯನು ಅನುಮಾನಿಸಿ
ಮರೆಯಿಂದ ನಿರಾಯುಧನ ವಧಿಸಿದವನ
ಗುಣಗಾನ ಮಾಡಿ ಮುಕುತಿಗೆ
ಹಾತೊರೆಯುವ ನಾವು..

ಒಂದು ಸಾರಿ ಮುಳುಗೇಳುವುದರಿಂದ
ಜನುಮದ ಪಾಪಗಳನೆಲ್ಲ ತೊಳೆಯಬಹುದೆಂದು
ನಂಬುವವರು ನಾವು..

ತಿಂದ ಹಣದಲ್ಲೊಂದಿಷ್ಟು
ಭಾಗ ಹುಂಡಿಗೆ ಹಾಕಿದೊಡೆ
ಅನ್ಯಾಯಗಳ ಕ್ಷಮಿಸುವ
ದೇವನೊಬ್ಬನಿಹನೆಮಗೆ..

ಕೊಟ್ಟ ಮಾತಿಗೆ ತಪ್ಪದವನನು
ಮಸಣಕೆ ಕಾವಲು ನಿಲಿಸಿ
ಹೆಂಡತಿ ಮಕ್ಕಳನು ಜೀತಕೆ ಸೇರಿಸಿ
ಮಜವುಂಡು ತೇಗುವ ಮಹಿಮರು ನಾವು..

ಕರ್ಮಭೂಮಿಯಿದು......
ಇಲ್ಲಿಯಲ್ಲದೇ ಎಲ್ಲಿ ದೊರಕೀತು
ಭ್ರಷ್ಟಾಚಾರ?

ಭಾನುವಾರ, ಫೆಬ್ರವರಿ 5, 2012

ದಾರಿಗಳ ಬೆನ್ನು ಹತ್ತಿ


ಎದೆಯ ಸಾಗರದಲ್ಲಿ ಏಳುವ
ಬಿರುಗಾಳಿಗೆ ತಲೆಯ ಹಡಗು
ಮುಳುಗಿ ಹೋಗುತ್ತದೆ
ಮೂರ್ಖನನ್ನಾಗಿ ಮಾಡಿ ನನ್ನ..

ದಾರಿಗಳ ಬೆನ್ನು ಹತ್ತುತ್ತ
ನಾನು ಗುರಿಯನ್ನೇ ಮರೆತುಬಿಟ್ಟೆ
ಉತ್ತರ ಹೇಳುವುದರಲ್ಲಿ ಅಲ್ಲ
ಪ್ರಶ್ನೆ ಕೇಳುವುದರಲ್ಲಿ ಜ್ಞಾನ ಅಡಗಿದೆ..

ರಾತ್ರಿ ಹನ್ನೆರಡಕ್ಕೆ ಎಚ್ಚರವಾಗುವ
ನನ್ನ ಕವಿತೆಗೆ ಕೆಲಸದ ಮುಲಾಜಿಲ್ಲ
ದಿನವೆಲ್ಲ ಮಜವಾಗಿ ತಿಂದುಬಿಡುವ
ಕೆಲಸಕ್ಕೆ ಕವಿತೆಯ ನೆನಪಿಲ್ಲ..

ಕಾಲಕಾಲಕ್ಕೆ ಕಾಲುಗಳನ್ನು
ಬದಲಾಯಿಸದಿದ್ದರೆ ನಿನಗೇ ಉಳಿಗಾಲವಿಲ್ಲ
ಎಂದರು ಡಾಕ್ಟರು
ಆಹಾ ! ಎರಡೆರಡು ವರಗಳನ್ನು ಹೀಗೆ
ಒಮ್ಮೆಲೆ ಕೊಡಬೇಡಿ ಎಂದ ಪೇಶಂಟ್..

ಹೆಂಗೆ ಬಂದೆ ರೋಡಿಗೆ


ಸತ್ತು ಬಿದ್ದಿದ್ದನ್ನು ಬಡಿದು
ಕೈ ಕಾಲು ಹಿಡಿದು ಅಲುಗಾಡಿಸಿ
ಓಹೋ ನನ್ನ ಕವಿತೆ ಜೀವಂತವಿದೆ
ಎಂದು ಬೊಬ್ಬೆ ಹೊಡೆಯುವುದಕ್ಕೂ
ಮನದ ಸ್ವಚ್ಛಂದ ಛಂದದ
ಆಲಿಂಗನದೇ ಮತ್ತೇರಿ ಬರುವ
ಶಬ್ದಾರ್ಥಗಳ ಧಬಧಬೆಗೂ
ಅಜಗಜಾಂತರ ವ್ಯತ್ಯಾಸವಿದೆ..

ಒಳಗೊಳಗೇ ಕುಳಿತು ಕೊಳೆತು
ನಾರಿದರೂ ಸರಿಯೇ
ಅಯ್ಯೋ ಹಾಳಾಗುತ್ತಲ್ಲ ಅಂತ
ಗಟ್ಟಿ ಇರುವ ಕಾಯಿಗಳನ್ನು ಆರಿಸಿ
ಘಮಘಮಿಸುವ ಮಸಾಲೆಯಲ್ಲಿ
ಚಪ್ಪರಿಸಿ ತಿನ್ನುವ ಹಾಗೆ
ಕೊಳೆ ಬದನೆಪಲ್ಲೆ ಮಾಡುವ
ಕೈಚಳಕ ಕವಿತೆ...

ಒಣಗಿದರೂ ಒಗ್ಗರಣೆಗೆ ರುಚಿ
ನೀಡುವ ಕರಿಬೇವು ಕವಿತೆ..

ಹಾಗಂತ ಕವಿತೆಯ ಬಗ್ಗೆಯೇ
ಕವನ ಸಂಕಲನ ಮಾಡುತ್ತೇನೆ ಅಂತಲ್ಲ.

ಟೈಪ್ ರೈಟಿಂಗ್ ಕಲಿತು, ನಾಲ್ಕು
ವರ್ಷ ಅದರ ಮುಖವೇ
ನೋಡದಿದ್ದರೆ ಆಗುವಷ್ಟು
ಸ್ಪೀಡ್ ಕಮ್ಮಿಯಾಗಿದೆ ಅಷ್ಟೇ
ಆದರೆ ಯಾವಕ್ಷರ ಎಲ್ಲುಂಟು
ಎಂದು ಬೆರಳುಗಳು ಹುಡುಕಬೇಕಿಲ್ಲ..

ನಾಲ್ಕಾರು ಲೈನು ನಾಲ್ಕಾರು ಕವಿತೆಗೆ
ಮತ್ತೆ ಒಗ್ಗಿ ಮನಸು
ಪೇಪರಿನ ತುಂಬಾ ಕವಿಗೋಷ್ಠಿ
ನಡೆಸಲು ರೆಡಿಯಾಗುತ್ತೆ
(ಹೆಂಡತಿಯಿಂದ ಬೈಸಿಕೊಳ್ಳುವ
ಭಂಡ ಧೈರ್ಯ ತಂದುಕೊಳ್ಳುತ್ತಲೇ)...

ಪ್ರಶ್ನೆಗಳು


ಬರೆಯಬೇಕೆಂಬ ತೀಟೆಗೆ
ನೂರೆಂಟು ವಿಘ್ನಗಳು
ಸಖ್ಯವಿಲ್ಲ, ಸುಖವಿಲ್ಲ,
ರಾಧೆ ಇಲ್ಲ, ರಕ್ತವಿಲ್ಲ,
ಕಾಲಕಾಲಕ್ಕೆ ತಕ್ಕಂತೆ ಇದ್ದ
ಕಾಲುಗಳನ್ನು ಕಿತ್ತು ಕೊಟ್ಟವನಿಗೆ
ನಡೆಯುವುದು ಸಾಧ್ಯವಿಲ್ಲ;
ಕೀರ್ತಿಯ ಬೆನ್ನು ಹತ್ತಿದಾಗ
ಅನ್ನವನ್ನೇ ಮರೆತು
ಅನ್ನದ ಬೆನ್ನು ಹತ್ತಿದಾಗ
ಕೀರ್ತಿಯ ಅಲಕ್ಷಿಸಿ,
ಹಿಡಿದ ದಾರವನ್ನು ಕೈ ಬಿಟ್ಟು
ಹಾರೆಂದರೆ ಹಾರೀತೇ ಪತಂಗ?
ಸೂತ್ರವಿಲ್ಲ, ಸುಸೂತ್ರವಿಲ್ಲ,
ಗಂಧವಿಲ್ಲ, ಗಾಳಿಯಿಲ್ಲ,
ಗಿಳಿಯ ಮರಿಗೆ ಮಾತು ನಾನು ಕಲಿಸಿದೆ,
ಬೈಗುಳ ತಂತಾನೇ ಕಲಿತು
ಬೈದೂ ಬಿಟ್ಟಿತು,
ಬೈಗುಳ ನಾನೇ ಕಲಿಸಿದೆ
ಎಂದು ನಂಬಲಿ ಹೇಗೆ?
ಗಿಳಿ ನನ್ನದಾದೊಡೆ
ಬೈಗುಳವೂ ನನ್ನದೇ
ಶಿಷ್ಟಾಚಾರಕ್ಕೆ ಸವಿನೆನಪುಗಳನ್ನು
ಮತ್ತೆ ಮತ್ತೆ ನೆನೆಸಿ
ಹೃದಯ ತುಂಬಿದ ಗಾಯಗಳನ್ನು
ಮರೆಯಲಿ ಹೇಗೆ?
ಪ್ರತಿಯೊಂದಕ್ಕೂ ಪ್ರಶ್ನೆಗಳ ಹಾಕಿ
ಉತ್ತರಗಳನ್ನು ಮರೆತುಬಿಟ್ಟರೆ
ಉತ್ತರದ ತಪ್ಪೇ?
ದಕ್ಷಿಣಕ್ಕೆ ಮುಖ ಮಾಡಿ
ಮಲಗಿದ್ದು ಆನೆಯ ತಪ್ಪೇ?
ನಾನು ತೊಯ್ಯಿಸಿಕೊಂಡಿದ್ದು
ಮಳೆಯ ತಪ್ಪೇ?
ಪ್ರಶ್ನೆಗಳಿಗೆ ಬುದ್ಧಿಯಿಲ್ಲ
ಉತ್ತರಗಳಿಗೆ ಚಿಂತೆಯಿಲ್ಲ..

ಪ್ರವೀಣ

ನೆನಪಿನ ಕುಣಿಕೆ


ಅಪ್ಪ ಗಡ್ಡ ಬೋಳಿಸುವುದನ್ನು
ಕಾತರದ ಕಂಗಳಿಂದ ನೋಡುತ್ತಿದ್ದ
ದಿನಗಳು ನೆನಪಾದವು
ಮಗನ ಕಾತರದ ಕಂಗಳಿಂದ

ಮದುವೆಯ ಮಧ್ಯಾಹ್ನ
ಮರದಡಿಗೆ ನಿಂತು
ದಮ್ಮು ಹೊಡೆದದ್ದು

ಸೈಕಲ್ಲಿನ ಎರಡೂ ಬದಿಗೆ
ಚೀಲ ಸಿಕ್ಕಿಸಿ ಭಿಕ್ಷಾನ್ನ
ಅಲೆದು ಕಲೆ ಹಾಕಿದ್ದು

ತಿಂಗಳ ಬೆಳಕಿನಲ್ಲಿ
ತಂಗಳನ್ನ ತಿಂದು
ತಂಗಾಳಿಯಲ್ಲಿ ತಂಗಿದ್ದು

ನಿಶೆಯೆಲ್ಲ ಇಳಿಯುವವರೆಗೆ
ನಕ್ಕು ನಕ್ಕು ಸಾಕಾಗಿ
ಹನ್ನೆರಡಕ್ಕೆ ಬಾಗಿಲು ತಟ್ಟಿ
ನೆನಪುಳಿಯದ ಬೈಗುಳ ತಿಂದಿದ್ದು

ನೆರೆಮನೆಯ ಹುಡುಗನ
ಕೂದಲು ಕತ್ತರಿಸಿ
ಮೈಯೆಲ್ಲಾ ಹೊಡೆಸಿಕೊಂಡಿದ್ದು

ಮೊದಲನೆಯ ಬಾರಿ
ಅಮ್ಮನಿಗೆ ತೋರಿಸಲಾಗದ
ಹುಡುಗಿಯ ಮೇಲೆ
ಕವನ ಬರೆದದ್ದು

ನೆನಪುಗಳ ಕುಣಿಕೆಯಲ್ಲಿ
ಕತ್ತು ಸಿಲುಕಿ
ಮರೆವಿನ ಸ್ವಚ್ಚಂದಕ್ಕೆ
ಪರಿತಪಿಸುತಿದೆ ಮನವು

---ಪ್ರವೀಣ

ಅವನು


ಕಗ್ಗತ್ತಲೆಯ ಅಪ್ಪುಗೆಯೊಳಗೆ
ಜೀವ ವಿಹ್ವಲಗೊಳುವಾಗ
ನಿಶ್ಯಬ್ದ ಬಂದು ದೀಪವನುರಿಸದೆ
ಆತ್ಮರತಿಯ ಮಾತುಗಳಲಿ
ಹೃನ್ಮನಗಳ ಅರಳಿಸಿದವನು.

ಹುಣಸೆ ಹಣ್ಣಿನ ಬೇಟೆಯಲಿ
ಅವನ ಆಶೆಯೆಲ್ಲ ತೀರಿದರೂ
ಕಲ್ಲು ಹೊಡೆಯುತ್ತಲೇ ಇದ್ದ
ನನ್ನ ಕಿಸೆ ತುಂಬುವವರೆಗೆ.

ನನ್ನ ದಿಗ್ಭ್ರಮೆಗಳಿಗೆಲ್ಲ
ಖೊಳ್ಳನೆ ನಕ್ಕು, ಸಿಕ್ಕು ಸಿಕ್ಕಾಗಿರುವ
ಕೂದಲಲಿ ಕ್ರೀಮಿನಂತೆ ಹರಡಿ
ಬಾಚಣಿಕೆಗೆ ಸಲೀಸು ಮಾಡಿದವನು.

ಭಾವದ್ವೀಪಗಳ ಮಧ್ಯೆ ಸಮುದ್ರ
ಉನ್ಮಾದದಲಿ ಭೋರ್ಗರೆಯುವಾಗ
ಬೃಹತ್ ಹಡಗನೆಳೆತಂದು
ಹೃದಯಕ್ಕೆ ತಲುಪಿಸಿದವನು.

ಒಡಲಾಳದ ಅಭೀಪ್ಸೆಯಲಿ
ನನ್ನ ಚಹರೆಯೇ ಕಣ್ಮರೆಯಾದಾಗ
ಕ್ಷಿತಿಜದಂಚನ್ನು ವಿಸ್ತರಿಸಿ
ನವರವಿಗೆ ಜನ್ಮ ಕೊಟ್ಟವನು.

ಮಧುಪಾನದ ಉನ್ಮತ್ತ ಮಾತು
ನಗೆಗಡಲಲ್ಲಿ ಮುಳುಗಿರುವಾಗ
ಅರ್ಥವಾಗಲಿಲ್ಲ; ನಶೆ ಏರಿದ್ದು
ಅಲ್ಕೋಹಾಲಿನಿಂದಲ್ಲ ಅವನ
ಮಾತಿನಿಂದ ಎಂದು.
ಇಂದು ಕುಡಿಯಲು ಒಬ್ಬನೇ ಕುಳಿತಾಗ.

..ಪ್ರವೀಣ..