ಶುಕ್ರವಾರ, ಫೆಬ್ರವರಿ 17, 2012

ಅಲೆಮಾರಿಗಳು ನಾವೆಲ್ಲಾ


ಅಲೆಮಾರಿಗಳು ನಾವು....

ಘಳಿಗೆಯ ತಿಳಿವಿಲ್ಲದೆ
ಗುಳೆ ಹೊರಟವರು ನಾವು
ಗಡಿಯಿಲ್ಲ, ಗುಡಿಯಿಲ್ಲ,
ಮಡಿಯಿಲ್ಲ, ದಮ್ಮಡಿಯಿಲ್ಲ

ಲಕ್ಷಾಂತರ, ಕೋಟ್ಯಾಂತರ
ಹಾಳಾಗಿ ಹೋದಾಗಲೇ
ಫಳಫಳನೆ ಹೊಳೆವೊಂದು
ಕುಳ ಇಳೆಗೆ ಇಳಿವುದು

ಹುಟ್ಟಿದ್ದೇ ಊರು
ಸಾಗಿದ್ದೆ ದಾರಿ
ತಲುಪಿದ್ದೆ ಗುರಿ
ನಾನೀನೆಂಬ ಹಮ್ಮಿಲ್ಲ ಬಿಮ್ಮಿಲ್ಲ

ಹೊಟ್ಟೆಗೆ ಹೊಟ್ಟೆಯನಂಟಿಗೆ
ತೃಷೆಯಾಗಿ, ಸರಿ ತಪ್ಪು
ಬಗೆಯದೆ, ತಿರೆಯಲೆದು
ತೃಪ್ತಿ ಕಂಡೇವು

ಅಲೆಮಾರಿಗಳು ನಾವು..

ಸೂರ್ಯನೇ ಸಿಟ್ಟಾಗಿ
ಗಗನಕೆ ದುಃಖಾಗಿ
ಗಾಳಿಯೇ ಸತ್ಹೋದ್ರೂ
ಸಿರಿವಂತಿಗೆ ಸೊರಗಿಲ್ಲ

ಹಿಂದೆ ನೆರಳಿಲ್ಲ
ಮುಂದೆ ಬೆಳಗಿಲ್ಲ
ಕ್ಷಣಕಾಲದ ಮಿಂಚಿಗೆ
ಜನ್ಮವೆಲ್ಲಾ ನಲಿದೆವು

ನೆಲದಲ್ಲಿ ಬೇರೂರಿ
ಕಾಂಡಗಳನೆಲ್ಲ ಚಾಚಿ
ಪರಸುಖವನಾಶಿಸದೆ
ಇಹದಲ್ಲೇ ಸಗ್ಗ ಕಂಡೇವು

ಅಲೆಮಾರಿಗಳು ನಾವು..
ಘಳಿಗೆಯ ತಿಳಿವಿಲ್ಲದೆ
ಗುಳೆ ಹೊರಟವರು ನಾವು

ಪ್ರವೀಣ..

3 ಕಾಮೆಂಟ್‌ಗಳು:

ಪುಷ್ಪರಾಜ್ ಚೌಟ ಹೇಳಿದರು...

ಖುಶಿಯಾಯ್ತು. ಸೂಕ್ಷ್ಮತೆಗೆ ಒತ್ತು ಕೊಟ್ಟಿದ್ದೀರಿ. ಪದಜೋಡಣಾ ಶೈಲಿ ಭಾವನೆಗಳನ್ನು ಎತ್ತಿ ಕಟ್ಟುವಲ್ಲಿ ಸಫಲ.

DEW DROP (ಮಂಜಿನ ಹನಿ) ಹೇಳಿದರು...

ಅನುಭವಗಳನ್ನು ಕವಿತೆಯ ಭಾವಕ್ಕೆ ಕೊಕ್ಕೆ ಹಾಕಿ ಸಿಕ್ಕಿಸುವ ಸೂಕ್ಷ್ಮ ಕವಿ ನಿಮ್ಮಲ್ಲಿದ್ದಾನೆ ಪ್ರವೀಣಣ್ಣ.. ಮನುಷ್ಯನ ಅಲೆಮಾರಿತನವನ್ನು ತೆರೆದಿಟ್ಟ ಬಗೆ ಸೂಕ್ಷ್ಮವಾಗಿದ್ದು ಕವಿತೆಯಲ್ಲಿನ ಭಾವಗಳು ಓದುಗನ ಮನಸ್ಸಿಗೆ ಲಗ್ಗೆ ಇಟ್ಟು ನಾವು ನಡೆದುಬಂದ ಹಾದಿಯನ್ನೊಮ್ಮೆ ವಿಮರ್ಶೆಗೊಳಪಡಿಸುವಂತೆ ಮಾಡುತ್ತದೆ.. ಚೆಂದದ ಕವಿತೆ..
ಘಳಿಗೆಯ ತಿಳಿವಿಲ್ಲದೆ
ಗುಳೆ ಹೊರಟವರು ನಾವು
ಗಡಿಯಿಲ್ಲ, ಗುಡಿಯಿಲ್ಲ,
ಮಡಿಯಿಲ್ಲ, ದಮ್ಮಡಿಯಿಲ್ಲ
ಈ ಮೊದಲ ಸಾಲುಗಳೇ ನನ್ನ ಮನಸನ್ನು ಸೂರೆಗೊಂಡವು.. ತುಂಬಾ ಇಷ್ಟವಾಯ್ತು ಕವಿತೆ..

PRAWINN ಹೇಳಿದರು...

ಪುಷ್ಪರಾಜ್ ಚೌಟ ಹಾಗೂ DEW DROP ಅವರಿಗೆ ಧನ್ಯವಾದಗಳು..