ಭಾನುವಾರ, ಫೆಬ್ರವರಿ 5, 2012

ಹೆಂಗೆ ಬಂದೆ ರೋಡಿಗೆ


ಸತ್ತು ಬಿದ್ದಿದ್ದನ್ನು ಬಡಿದು
ಕೈ ಕಾಲು ಹಿಡಿದು ಅಲುಗಾಡಿಸಿ
ಓಹೋ ನನ್ನ ಕವಿತೆ ಜೀವಂತವಿದೆ
ಎಂದು ಬೊಬ್ಬೆ ಹೊಡೆಯುವುದಕ್ಕೂ
ಮನದ ಸ್ವಚ್ಛಂದ ಛಂದದ
ಆಲಿಂಗನದೇ ಮತ್ತೇರಿ ಬರುವ
ಶಬ್ದಾರ್ಥಗಳ ಧಬಧಬೆಗೂ
ಅಜಗಜಾಂತರ ವ್ಯತ್ಯಾಸವಿದೆ..

ಒಳಗೊಳಗೇ ಕುಳಿತು ಕೊಳೆತು
ನಾರಿದರೂ ಸರಿಯೇ
ಅಯ್ಯೋ ಹಾಳಾಗುತ್ತಲ್ಲ ಅಂತ
ಗಟ್ಟಿ ಇರುವ ಕಾಯಿಗಳನ್ನು ಆರಿಸಿ
ಘಮಘಮಿಸುವ ಮಸಾಲೆಯಲ್ಲಿ
ಚಪ್ಪರಿಸಿ ತಿನ್ನುವ ಹಾಗೆ
ಕೊಳೆ ಬದನೆಪಲ್ಲೆ ಮಾಡುವ
ಕೈಚಳಕ ಕವಿತೆ...

ಒಣಗಿದರೂ ಒಗ್ಗರಣೆಗೆ ರುಚಿ
ನೀಡುವ ಕರಿಬೇವು ಕವಿತೆ..

ಹಾಗಂತ ಕವಿತೆಯ ಬಗ್ಗೆಯೇ
ಕವನ ಸಂಕಲನ ಮಾಡುತ್ತೇನೆ ಅಂತಲ್ಲ.

ಟೈಪ್ ರೈಟಿಂಗ್ ಕಲಿತು, ನಾಲ್ಕು
ವರ್ಷ ಅದರ ಮುಖವೇ
ನೋಡದಿದ್ದರೆ ಆಗುವಷ್ಟು
ಸ್ಪೀಡ್ ಕಮ್ಮಿಯಾಗಿದೆ ಅಷ್ಟೇ
ಆದರೆ ಯಾವಕ್ಷರ ಎಲ್ಲುಂಟು
ಎಂದು ಬೆರಳುಗಳು ಹುಡುಕಬೇಕಿಲ್ಲ..

ನಾಲ್ಕಾರು ಲೈನು ನಾಲ್ಕಾರು ಕವಿತೆಗೆ
ಮತ್ತೆ ಒಗ್ಗಿ ಮನಸು
ಪೇಪರಿನ ತುಂಬಾ ಕವಿಗೋಷ್ಠಿ
ನಡೆಸಲು ರೆಡಿಯಾಗುತ್ತೆ
(ಹೆಂಡತಿಯಿಂದ ಬೈಸಿಕೊಳ್ಳುವ
ಭಂಡ ಧೈರ್ಯ ತಂದುಕೊಳ್ಳುತ್ತಲೇ)...

1 ಕಾಮೆಂಟ್‌:

vandana shigehalli ಹೇಳಿದರು...

nice
ಮತ್ತೆ ಬರೆಯಿರಿ ಮತ್ತೆ ಮತ್ತೆ ಬರೆಯಿರಿ ......
ಸುಂದರ ಕವಿತೆ ....
http://mownadache.blogspot.in/

ಬೇಟಿ ನೀಡಿ