ಸೋಮವಾರ, ಫೆಬ್ರವರಿ 20, 2012

ಸೂತ್ರ


ನಾಳೆಯ ಉಳಿಕೆಗಾಗಿ
ಇಂದು ಭಗ್ಗನೆ ಉರಿದು
ಭಗ್ನಗೊಂಡಿತು ಮನವು

ನಾಳೆಯ ನೆಗಡಿಗೆ ಬೆದರಿ
ಇಂದಿನ ಮಳೆಯಲಿ ನೆನೆಯದೆ
ಶುಷ್ಕವಾಯಿತು ಹೃದಯ

ಇಂದು ಮತ್ತೆಂದೂ ಬರದು
ಬಂದ ಅನುಭವ ಉಂಡು
ತೇಗುವುದಷ್ಟೇ ಸಿರಿತನ

ನೆನ್ನೆಯನು ಕುಕ್ಕಿಸದೆ
ನಾಳೆಯನು ಲೆಕ್ಕಿಸದೆ
ಇಂದು ಉಕ್ಕಿದುದೆ ಗೆಳೆತನ

ನೆನ್ನೆಯ ಉತ್ತರ ಕಂಡು
ನಾಳೆಯ ಪ್ರಶ್ನೆಗಳಿಗೆ
ಸೂತ್ರ ಕಟ್ಟಿದ್ದು ಇಂದು

ನೆನ್ನೆ ಕಳೆದ ಸಿಂಧು
ನಾಳೆ ಆಶಿಸುವ ಬಿಂದು
ಎರಡರ ಸಂಧಿ ಇಂದು

ಭೂತಗಳಿಗೆ ಹೆದರದೆ
ಭವಿಷ್ಯತ್ತಿನಲ್ಲಿ ಕಳೆಯದೆ
ಇಂದು ಆನಂದದಿ ತೇಲಲಿ

ನೆನ್ನೆಯ ಮಧುರ ನೆನಪು
ನಾಳೆಯಭ್ಯುದಯದ ಕನಸು
ಇಂದಿನ ದಿನವನು ರೂಪಿಸಲಿ.

...ಪ್ರವೀಣ.

2 ಕಾಮೆಂಟ್‌ಗಳು:

ರವಿ ಮೂರ್ನಾಡು ಹೇಳಿದರು...

ವಾಹ್‍..! ಮತ್ತೊಂದು ಭಾವಕದ್ದಿದ ಕವಿತೆ. ಎಳೆ ಎಳೆಯಾಗಿ ಮೂಡಿದೆ ಸಾಲುಗಳಲ್ಲಿ ಮೈದಾಳಿದ ಪ್ರತಿಮಾ ಸಂಪತ್ತು. ಶುಭವಾಗಲಿ.

ಮಂಜಿನ ಹನಿ ಹೇಳಿದರು...

ಜೀವನದ ಹಾದಿಗಿಡಿದ ಕೈಗನ್ನಡಿ ಈ ಕವಿತೆ.. ಕೆಲವು ವ್ಯಾಖ್ಯಾನಗಳಂತೂ ಮನಸ್ಸಿನಲ್ಲಿ ಅಚ್ಚೊತ್ತಿಸುತ್ತವೆ.. ತುಂಬಾ ಚೆನ್ನಾಗಿ ಬರೆಯುತ್ತಿದ್ದೀರಿ ಪ್ರವೀಣಣ್ಣ, ಇನ್ನಷ್ಟು ಸಶಕ್ತ ಬರಹಗಳು ನಿಮ್ಮಿಂದ ಮೂಡಿ ಬರಲಿ ಎಂಬ ಹಾರೈಕೆ ನನ್ನದು..:)))
ಇಂದು ಮತ್ತೆಂದೂ ಬರದು
ಬಂದ ಅನುಭವ ಉಂಡು
ತೇಗುವುದಷ್ಟೇ ಸಿರಿತನ
ಈ ಪ್ರತಿಮೆ ನನಗೆ ತುಂಬಾ ಹಿಡಿಸಿತು..